ಭಾನುವಾರ, ಫೆಬ್ರವರಿ 6, 2011

ಮಾನ್ಯ ಯಡಿಯೂರಪ್ಪರವರು ಹೇಳಿದ್ದೇನು?

ಬೆಂಗಳೂರು ಫೆ.೪
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದೀಪ ಬೆಳಗುವ ಮುಖಾಂತರ ವಿಧ್ಯುಕ್ತವಾಗಿ ಉದ್ಘಾಟಿಸಿದ ನಂತರ ಸಮ್ಮೇಳನವನ್ನು ಉದ್ದೇಶಿಸಿ ಬರೆದುಕೊಂಡು ತಂದ ಸಂದೇಶವನ್ನು ವಾಚಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕನ್ನಡಕ್ಕಾಗಿ ಸಕಲ ಸೇವೆಗೂ ಸಿದ್ಧ ಎಂದು ಹೇಳಿದ್ದಾರೆ. ಹಾಗೆಯೇ ಸರಕಾರದ ವತಿಯಿಂದ ಕನ್ನಡದ ಸೇವೆಗಾಗಿ ಸಂದ ಅನುದಾನಗಳ ಪಟ್ಟಿಯನ್ನು ನೀಡಿದ್ದಾರೆ.

ವೇದಿಕೆಯ ಮೇಲಿದ್ದ ಆದಿಚುಂಚನಗಿರಿ ಬಾಲಗಂಗಾಧರ ಸ್ವಾಮಿಜಿ, ಸಮ್ಮೇಳನಾಧ್ಯಕ್ಷ ಜಿ. ವೆಂಕಟಸುಬ್ಬಯ್ಯ, 76ನೇ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ಗೀತಾ ನಾಗಭೂಷಣ, ನಾಡೋಜ ದೇ. ಜವರೇಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಆರ್ ಅಶೋಕ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ವಸತಿ ಸಚಿವ ಸೋಮಣ್ಣ, ಸಂಸದ ಅನಂತಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಆರ್ ಕೆ ನಲ್ಲೂರು ಪ್ರಸಾದ್ ಅವರನ್ನು ಸಂಬೋಧಿಸಿದ ನಂತರ ಭಾಷಣ ಓದಲು ಯಡಿಯೂರಪ್ಪ ಪ್ರಾರಂಭಿಸಿದರು.

ಅವರ ಭಾಷಣದ ಮುಖ್ಯ ಅಂಶಗಳು ಇಲ್ಲಿವೆ

* ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಫಾಟಿಸುವ ಸದವಕಾಶ ದೊರೆತಿರುವುದು ನನ್ನಲ್ಲಿ ಅತೀವ ಹರ್ಷವನ್ನುಂಟುಮಾಡಿದೆ. ಕರುನಾಡ ಸಿರಿನುಡಿಯ ದೀಪ ಬೆಳಗಿಸಿ ಕನ್ನಡದ ಡಿಂಡಿಮವನ್ನು ಮೊಳಗಿಸಲು ನಮಗೆ ಅವಕಾಶ ದೊರೆತಿರುವ ಮಹತ್ವದ ಸಮ್ಮೇಳನವಿದು.

* 1970ರಲ್ಲಿ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಿತ್ತು. ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ದೇ.ಜವರೇಗೌಡ ಅವರು ಇಂದು ನಮ್ಮ ನಡುವೆ ಇರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.

* ಸರಿಸುಮಾರು ಒಂದು ಕೋಟಿ ಜನಸಂಖ್ಯೆಯನ್ನು ತನ್ನ ಒಡಲಿನಲ್ಲಿ ಪೋಷಿಸುತ್ತಿರುವ ಬೆಂಗಳೂರು ಮಹಾನಗರದಲ್ಲಿ ಕನ್ನಡಿಗರ ಒಟ್ಟೊಟ್ಟಿಗೆ ಕನ್ನಡೇತರರು ಬದುಕುತ್ತಿದ್ದಾರೆ. ಕನ್ನಡಿಗರ ಆತಿಥ್ಯ ಪ್ರಿಯತೆ, ಸಹನಶೀಲತೆ, ಸೋದರಭಾವ ಹಾಗೂ ಎಲ್ಲರೊಳಗೆ ಒಂದಾಗುವ ಗುಣವಿಶೇಷದಿಂದಾಗಿ ಕನ್ನಡೇತರರ ಬದುಕಿಗೆ ಭದ್ರತೆ ದೊರೆತಿದೆ.

* ಎರಡು ಸಾವಿರ ವರ್ಷಗಳಿಗೂ ಮಿಕ್ಕ ಅಮೂಲ್ಯ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೇನೋ ದೊರೆತಿದೆ. ಆದರೆ ಆ ಸ್ಥಾನಮಾನದ ಜೊತೆಗೆ ಬರಬೇಕಾದ ಸೌಲಭ್ಯಗಳನ್ನು ಕೇಂದ್ರ ಸರ್ಕಾರದಿಂದ ದೊರಕಿಸಿಕೊಳ್ಳುವ ಪ್ರಯತ್ನ ಈವರೆಗೆ ಕೈಗೂಡಿಲ್ಲ. ಆ ದಿಶೆಯಲ್ಲಿ ಪ್ರಯತ್ನಗಳು ಮುಂದುವರಿದಿವೆ.

* ಕನ್ನಡ ತಾಯಿ ಭುವನೇಶ್ವರಿಯ ಆಳೆತ್ತರದ ಪ್ರತಿಮೆ ಪ್ರತಿಷ್ಠಾಪನೆಗೆ ಚಿಂತನೆ. ಅಮೆರಿಕಾದ ಸ್ವಾತಂತ್ರ್ಯ ಪ್ರತಿಮೆ (Liberty Statue) ಮಾದರಿಯಲ್ಲಿ ಭುವನೇಶ್ವರಿಯ ಮೂರ್ತಿ ಸ್ಥಾಪನೆಗೆ ಸರಕಾರ ಯೋಚಿಸುತ್ತಿದೆ.

* ರಾಜಕಾರಣಗಳ ಪಾತ್ರ ಇಲ್ಲಿ ಗೌಣ. ಇಲ್ಲಿ ನಮ್ಮದು ಪೋಷಕ ಪಾತ್ರವಷ್ಟೆ. ಆದರೂ ಬರಹಗಾರರು, ಸೃಜನಶೀಲರು, ಚಿಂತಕರು ಮತ್ತು ಸಾಧಕರ ನಡುವೆ ನಾಡು ಮತ್ತು ನುಡಿ ಬಗ್ಗೆ ನಡೆಯುವ ಅರ್ಥಪೂರ್ಣ ಚರ್ಚೆ ಮತ್ತು ಚಿಂತನೆಗಳಿಂದ ಪ್ರಯೋಜನ ಪಡೆದು ಉತ್ತಮವಾದದ್ದನ್ನು ನಾಡಿಗೆ ನೀಡುವ ಅವಕಾಶ ದೊರೆಯುತ್ತದೆಂಬ ಕಾರಣಕ್ಕೆ ರಾಜಕಾರಣಿಗಳು ಸಮ್ಮೇಳನಗಳಲ್ಲಿ ಭಾಗವಹಿಸಲು ಇಚ್ಛಿಸುತ್ತಾರೆ. ನನ್ನದೂ ಕೂಡಾ ಇದೇ ಭಾವನೆಯಾಗಿದೆ.

* ನನ್ನ ಸಂಪುಟ ಸಹೋದ್ಯೋಗಿಯಾಗಿರುವ ಆರ್. ಅಶೋಕ ಅವರ ನೇತೃತ್ವದ ಸಮ್ಮೇಳನ ಸಮಿತಿಯು ಈ ವರ್ಷ ಬೆಂಗಳೂರಿನಲ್ಲಿ ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣವಾಗಿ ಏರ್ಪಡಿಸಿರುವುದಕ್ಕೆ ಅವರನ್ನೂ ಕೂಡಾ ಅಭಿನಂದಿಸುತ್ತೇನೆ.

* ಬೆಂಗಳೂರಿನ ಸಾಹಿತ್ಯ ಸಮ್ಮೇಳನಕ್ಕೆ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿ ಪಡೆದಿರುವ ಹಿರಿಯ ಚೇತನ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರಿಗೆ ಅಧ್ಯಕ್ಷತೆಯ ಗೌರವ ಸಂದಿರುವುದು ಔಚಿತ್ಯಪೂರ್ಣವಾಗಿದೆ. ಎಂದೋ ಸಲ್ಲಬೇಕಾದ ಗೌರವ ಈಗಲಾದರೂ ಸಂದಿತಲ್ಲ ಎಂಬ ಸಂತಸ ನಮ್ಮೆಲ್ಲರದು. ಶತಾಯುಷಿಯಾಗುವತ್ತ ಮುನ್ನಡೆದಿರುವ ಅವರ ವಿದ್ವತ್‌ಪೂರ್ಣ ಅಧ್ಯಕ್ಷೀಯ ಭಾಷಣವನ್ನು ಆಲಿಸಲು ನಿಮ್ಮೆಲ್ಲರಂತೆಯೇ ನಾನು ಸಹ ಉತ್ಸುಕನಾಗಿದ್ದೇನೆ.

* ನಾಡ ಜನತೆ ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳಿಗೆ ಪರಿಹಾರ ಸೂಚಿಸಬಲ್ಲ ಸಾಹಿತ್ಯ ಸೃಜನೆ ಆಗಬೇಕು. ಅಂತಹ ಪ್ರಯತ್ನಗಳಿಗೆ ಸಾಹಿತ್ಯ ಸಮ್ಮೇಳನ ಇಂಬುಗೊಡಲಿ ಎಂದು ಆಶಿಸುತ್ತೇನೆ.

* ನಮ್ಮ ಸರ್ಕಾರ ಈ ಕರ್ತವ್ಯ ನೆರವೇರಿಸುವಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ ಎಂಬ ಭರವಸೆಯನ್ನು ನಾಡಿನ ಜನರಿಗೆ ನೀಡಬಯಸುತ್ತೇನೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂವರ್ಧನೆಗೆ ಪೂರಕವಾಗುವಂತಹ ಕಾರ್ಯಕ್ರಮಗಳಿಗೆ 200 ಕೋಟಿ ರೂ.ಗಳಿಗೂ ಹೆಚ್ಚು ವಾರ್ಷಿಕ ಬಜೆಟ್ ಅನುದಾನ ಒದಗಿಸಿಕೊಟ್ಟ ತೃಪ್ತಿ ನಮ್ಮ ಸರ್ಕಾರಕ್ಕಿದೆ. ನಾವು ಅಧಿಕಾರಕ್ಕೆ ಬರುವ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ಷಿಕ ಬಜೆಟ್ ಅನುದಾನ 40ರಿಂದ 50 ಕೋಟಿ ರೂ.ಗಳಿತ್ತು. ಈಗ 200 ಕೋಟಿ ರೂ.ಗಳನ್ನು ಮೀರಿದೆ.

* ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ನಮ್ಮ ಸರ್ಕಾರ ನೀಡಿದೆ. ಮುಂದೆಯೂ ನೀಡಲು ಬದ್ಧವಾಗಿದೆ. ಆ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಲೋಪಕ್ಕೆ ಎಡೆಗೊಡದಂತೆ ನಡೆದುಕೊಳ್ಳುವ ಭರವಸೆ ನೀಡುತ್ತೇನೆ. ಸಾಹಿತ್ಯ ಪರಿಷತ್ತಿನಲ್ಲಿ ನೂತನವಾಗಿ ಸಂಶೋಧನಾ ಕೇಂದ್ರವೊಂದನ್ನು ನಮ್ಮ ಸರ್ಕಾರ ಸ್ಥಾಪಿಸಿದ್ದು, ಇದರ ಚಟುವಟಿಕೆಗಳಿಗಾಗಿ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

* ಜೊತೆಗೆ ಬೃಹತ್ ನಿಘಂಟುಗಳ ಮುದ್ರಣಕ್ಕಾಗಿ ಒಂದು ಕೋಟಿ ರೂ.ಗಳನ್ನು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಲಾ ನಲವತ್ತೈದು ಲಕ್ಷ ರೂ.ಗಳನ್ನು ನಮ್ಮ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅಭಿಜಾತ ಭಾಷೆಯಾಗಿ ಮನ್ನಣೆ ಪಡೆದಿರುವ ಕನ್ನಡ ಭಾಷೆಯ ಒಟ್ಟಾರೆ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು 2010-11ನೇ ಸಾಲಿನಲ್ಲಿ 50 ಕೋಟಿ ರೂ.ಗಳನ್ನು ಪ್ರತ್ಯೇಕವಾಗಿ ಒದಗಿಸಲಾಗಿದೆ.

* ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳ ಗ್ರಂಥಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಲು ಕುವೆಂಪು ಭಾಷಾ ಭಾರತಿಗೆ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಮಹತ್ವದ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಕನ್ನಡ ಸಾಂಸ್ಕೃತಿಕ ಭವನವನ್ನು ನಿರ್ಮಿಸಲು 2 ಕೋಟಿ ರೂ.ಗಳನ್ನು ಹಾಗೂ ಸಮ್ಮೇಳನದ ಸಿದ್ಧತೆಗಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

* ಈ ವರ್ಷ ಯಾವುದೇ ನೂತನ ನಿರ್ಣಯಗಳನ್ನು ಕೈಗೊಳ್ಳದೆ ಹಳೆಯ ನಿರ್ಣಯಗಳನ್ನೆಲ್ಲ ಅನುಷ್ಠಾನ ಮಾಡುವ ನಿರ್ಣಯವನ್ನಷ್ಟೆ ತೆಗೆದುಕೊಳ್ಳುವುದಾಗಿ ಈಗಾಗಲೇ ಸಮ್ಮೇಳನದ ಅಧ್ಯಕ್ಷರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಇದು ಸಹ ಶ್ಲಾಘನೀಯ. ಆದಷ್ಟೂ ಅನುಷ್ಠಾನಯೋಗ್ಯವಾದ ನಿರ್ಣಯಗಳನ್ನು ಕೈಗೊಳ್ಳುವುದಲ್ಲದೇ ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿವಿಧಾನಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದರೆ ಅವುಗಳನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಲಿಚ್ಚಿಸುತ್ತೇನೆ.

* ಕನ್ನಡ ಅಭಿವೃದ್ಧಿಗಾಗಿ ಅನೇಕ ಕೆಲಸಗಳು ಇನ್ನೂ ಬಾಕಿ ಇವೆ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಇನ್ನೂ ಹೆಚ್ಚಬೇಕಾಗಿದೆ. ಗಡಿ ಪ್ರದೇಶಗಳಲ್ಲಿ ಕನ್ನಡ ಮಕ್ಕಳಿಗೆ ಸೌಲಭ್ಯವನ್ನು ವೃದ್ಧಿಗೊಳಿಸಬೇಕಾಗಿದೆ.

* ಈ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಿ ನೆರವೇರಲಿ. ಕನ್ನಡ ಜನಮನದಲ್ಲಿ ಹೊಸ ಸ್ಫೂರ್ತಿ ತುಂಬಲಿ ಎಂದು ಮನಃಪೂರ್ವಕವಾಗಿ ಹಾರೈಸಿ 77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಭಕೋರುತ್ತಾ ಕವಿ ನಿಸಾರ್ ಅಹಮ್ಮದ್ ಅವರ ಈ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

"ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು
ರವಿಶಶಿ ತಾರೆಯ ನಿತ್ಯೋತ್ಸವವಿದು, ಸರಸತಿ ವೀಣೆಯ ಸೊಲ್ಲು"