ಬುಧವಾರ, ನವೆಂಬರ್ 3, 2010

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.24ರಿಂದ

ಕೃಪೆ:ಪ್ರಜಾವಾಣಿ ವಾರ್ತೆ-2-11-2010
ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ ಸಮ್ಮೇಳನದ ಸ್ವಾಗತ ಸಮಿತಿ ಮಹಾ ಅಧ್ಯಕ್ಷರೂ ಆದ ಸಚಿವ ಆರ್.ಅಶೋಕ ಮಾತನಾಡಿ, ‘ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಹಜವಾಗಿಯೇ ಸಂತಸ ತಂದಿದೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ನಡೆಸಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಪ್ರಕಟವಾಗಿದ್ದು, ಸಮ್ಮೇಳನವು ಡಿಸೆಂಬರ್ 24, 25 ಹಾಗೂ 26ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಇದೇ 10ರಂದು ನಡೆಯಲಿರುವ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದೆ.ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಂಗಳವಾರ ನಡೆದ ಸ್ವಾಗತ ಸಮಿತಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, 25ರಂದು ಕ್ರಿಸ್‌ಮಸ್ ರಜೆ ಹಾಗೂ 26 (ಭಾನುವಾರ) ರಜಾ ದಿನವಾದ ಕಾರಣ ಈ ದಿನಗಳಲ್ಲೇ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು’ ಎಂದರು.‘ಸಮ್ಮೇಳನದಲ್ಲಿ ಎರಡು ಕವಿಗೋಷ್ಠಿಗಳು ನಡೆಯಲಿದ್ದು, ಇತರೆ 12 ಗೋಷ್ಠಿಗಳನ್ನು ಆಯೋಜಿಸಲಾಗುವುದು.ಸನ್ಮಾ ನಕ್ಕೆ ಅರ್ಹರಾದವರು ದೊಡ್ಡ ಸಂಖ್ಯೆಯಲ್ಲಿದ್ದು, ಸನ್ಮಾನಿತರ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಹಾಗೆಯೇ 8 ಆಕರ ಗ್ರಂಥಗಳ ಪ್ರಕಟಣಾ ಕಾರ್ಯ ನಡೆದಿದೆ. ಜತೆಗೆ ಇತರೆ ಕೃತಿಗಳನ್ನು ಪ್ರಕಟಿಸಲಾಗುವುದು’ ಎಂದು ಹೇಳಿದರು.
ಗೌರವ ಧನವಿಲ್ಲ: ‘ಸಮ್ಮೇಳನಾಧ್ಯಕ್ಷರಿಗೆ ಗೌರವ ಧನ ನೀಡುವುದಿಲ್ಲ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಬ್ಯಾಗ್ ಸೇರಿದಂತೆ ಯಾವುದೇ ವಸ್ತುಗಳನ್ನು ನೀಡುವುದಿಲ್ಲ. ಅದ್ಧೂರಿ ಊಟೋಪಚಾರವಿರುವುದಿಲ್ಲ. ಆದರೆ ಉತ್ತಮ ಊಟದ ವ್ಯವಸ್ಥೆ ಇರುತ್ತದೆ’ ಎಂದರು.‘ಇದೇ 10ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಆ ದಿನವೇ ಹೆಸರು ಪ್ರಕಟಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು. ಕವಿಗಳ ಕುರಿತಾದ ನಾಟಕ ಪ್ರದರ್ಶನ ಕೂಡ ನಡೆಯಲಿದೆ’ ಎಂದರು.‘ಐಟಿ, ಬಿಟಿ ಕ್ಷೇತ್ರದಲ್ಲಿನ ಅಭಿವೃದ್ಧಿಯ ಬಳಿಕ ಬೆಂಗ ಳೂ ರಿನಲ್ಲಿ ಕನ್ನಡ ಭಾಷೆ ಕಂಗೆಟ್ಟ ಸ್ಥಿತಿ ತಲುಪಿದೆ. ಹಾಗಾಗಿ ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೂರಕವಾಗಿ ಸಮ್ಮೇಳನವನ್ನು ಇಲೇ ಆಯೋಜಿಸಲಾಗಿದೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆ ಮಾಡಲಾಗುವುದು’ ಎಂದು ಹೇಳಿದರು.ಸಮ್ಮೇಳನದ ಲಾಂಛನ ಬಿಡುಗಡೆ ಮಾಡಿದ ಸಮ್ಮೇಳನದ ಸ್ವಾಗತ ಸಮಿತಿ ಮಹಾ ಅಧ್ಯಕ್ಷರೂ ಆದ ಸಚಿವ ಆರ್.ಅಶೋಕ ಮಾತನಾಡಿ, ‘ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಹಜವಾಗಿಯೇ ಸಂತಸ ತಂದಿದೆ. ಕಲೆ, ಸಂಸ್ಕೃತಿ, ಭಾಷೆ ಉಳಿದಾಗ ಮಾತ್ರ ಆ ನಾಡಿನ ಕೀರ್ತಿ ಉಳಿಯುತ್ತದೆ’ ಎಂದರು.‘ಭಾಷೆ, ಸಂಸ್ಕೃತಿಯನ್ನು ಕಳೆದುಕೊಂಡ ನಾಡಿಗೆ ಯಾವುದೇ ವಿಶೇಷ ಗುರುತು ಉಳಿದುಕೊಳ್ಳುವುದಿಲ್ಲ.ಹಾಗಾಗಿ ಕನ್ನಡ ಭಾಷಾ ಬೆಳವಣಿಗೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಗಡಿ ಭಾಗದ ಪ್ರದೇಶಗಳಲ್ಲಿ ಕನ್ನಡಿಗರ ಸ್ಥಿತಿಗತಿ ಸುಧಾರಿಸುತ್ತಿದೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡತನ ಮರೆಯಾಗುತ್ತಿರುವುದು ವಿಷಾದನೀಯ.ಬೆಂಗಳೂರಿನಲ್ಲಿರುವ ಅನ್ಯಭಾಷಿಕರು ಕನ್ನಡ ನಾಡು- ನುಡಿಯ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು.ಕನ್ನಡಿಗರು ಸಹ ಭಾಷಾ ಬಳಕೆಯ ಬಗ್ಗೆ ಗಮನ ನೀಡಬೇಕು’ ಎಂದರು.‘ಈ ಬಾರಿಯ ಸಮ್ಮೇಳನ ಒಂದು ಮೈಲಿಗಲ್ಲು ಎಂಬಂತೆ ಯಶಸ್ವಿಯಾಗಿ ನಡೆಸಲಾಗುವುದು. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಅದರಲ್ಲೂ ನಗರದಲ್ಲಿರುವ ಕನ್ನಡಿಗರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದರು.‘ಸಮ್ಮೇಳನವನ್ನು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲೇ ನಡೆಸುವ ಕುರಿತು ಚರ್ಚೆ ನಡೆದಿದೆ.ಏಕೆಂದರೆ ಈ ಭಾಗದಲ್ಲಿ ಸಾಕಷ್ಟು ಕಲ್ಯಾಣ ಮಂಟಪಗಳು, ಶಿಕ್ಷಣ ಸಂಸ್ಥೆಗಳಿವೆ. ಇದರಿಂದ ವಸತಿ ಸೌಲಭ್ಯ ಕಲ್ಪಿಸುವುದು ಅನುಕೂಲವಾಗಲಿದೆ. ಸಮ್ಮೇಳನ ಯಶಸ್ವಿಯಾದರೆ ಆ ಗೌರವ ಪ್ರತಿಯೊಬ್ಬ ಕನ್ನಡಿಗನಿಗೆ ಸಲ್ಲುತ್ತದೆ’ ಎಂದರು.ಕನ್ನಡ ನಾಮಫಲಕವಿರಲಿ: ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ‘ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ರಾಜ್ಯದ ಎಲ್ಲ ಭಾಗಗಳಿಂದಲೂ ಕನ್ನಡಾಭಿಮಾನಿಗಳು ಆಗಮಿಸಲಿದ್ದಾರೆ.ಆದರೆ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಪ್ರಮುಖ ರಸ್ತೆಗಳು ಹಾಗೂ ನಗರದಾದ್ಯಂತ ನಾಮಫಲಕಗಳು ಅನ್ಯ ಭಾಷೆಗಳಲ್ಲಿರುವುದು ಸರಿಯಲ್ಲ’ ಎಂದರು.‘ಹಾಗಾಗಿ ಮಾಸಾಂತ್ಯದ ವೇಳೆಗೆ ಎಲ್ಲ ಫಲಕಗಳನ್ನು ಕನ್ನಡ ಭಾಷೆಯಲ್ಲೇ ಪ್ರಧಾನವಾಗಿರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಡಿಸೆಂಬರ್ ಮೊದಲ ವಾರದಿಂದ ಕನ್ನಡ ಪರ ಸಂಘಟನೆಗಳೊಂದಿಗೆ ಅನ್ಯ ಭಾಷಾ ಫಲಕಗಳ ತೆರವು ಆಂದೋಲನ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಸಮ್ಮೇಳನದ ಆಕರ್ಷಕ ಲಾಂಛನ ಸಿದ್ಧಪಡಿಸಿದ ವಿನ್ಯಾಸಕಾರ ಬಾಗೂರು ಮಾರ್ಕಂಡೇಯ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನೆಲಮಂಗಲದ ಸಮಾಜ ಸೇವಕ ಎಸ್. ಮಲ್ಲಯ್ಯ ಅವರು ಸಮ್ಮೇಳನಕ್ಕೆ ಒಂದು ಲಕ್ಷದ ಒಂದು ರೂಪಾಯಿಯನ್ನು ದೇಣಿಗೆಯಾಗಿ ನೀಡಿದರು.ಸ್ವಾಗತ ಸಮಿತಿ ಸಂಚಾಲಕರಾದ ವಿಧಾನ ಪರಿಷತ್ ಸದಸ್ಯ ಆರ್. ಅಶ್ವತ್ಥನಾರಾಯಣ, ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ. ರಾಮೇಗೌಡ, ಪರಿಷತ್ ಗೌರವ ಕಾರ್ಯದರ್ಶಿ ಟಿ.ಎಸ್. ದಕ್ಷಿಣಾ ಮೂರ್ತಿ ಇತರರು ಉಪಸ್ಥಿತರಿದ್ದರು.