ಬುಧವಾರ, ನವೆಂಬರ್ 3, 2010

ಬೆಂಗಳೂರು ಸಾಹಿತ್ಯಸಮ್ಮೇಳನಕ್ಕೆ ಲಾಂಛನ

ಕೃಪೆ:ಉದಯವಾಣಿ-2-11-2010
ಬೆಂಗಳೂರು: ನಾಲ್ಕು ದಶಕಗಳ ನಂತರ ರಾಜಧಾನಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಲಿರುವ 77ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯವನ್ನು ಬಿಂಬಿಸುವ 'ಲಾಂಛನ' ಮಂಗಳವಾರ ಇಲ್ಲಿ ಬಿಡುಗಡೆಗೊಂಡಿತು.ಕಲಾವಿದ ಬಾಗೂರು ಮಾರ್ಕಂಡೇಯ ಸಿದ್ಧಪಡಿಸಿದ ಲಾಂಛನವನ್ನು ಗೃಹ ಸಚಿವ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಆರ್‌. ಅಶೋಕ್‌, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆ ಮಾಡಿದರು.ಸಮ್ಮೇಳನವನ್ನು ಡಿಸೆಂಬರ್‌ 24,25,26 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ನಲ್ಲೂರು ಪ್ರಸಾದ್‌ ಇದೇ ಸಂದರ್ಭದಲ್ಲಿ ಘೋಷಿಸಿದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಯಲಿದ್ದು, ನ.10ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರು ಯಾರೆಂದು ತೀರ್ಮಾನಿಸಲಾಗುತ್ತದೆ ಎಂದು ನಲ್ಲೂರು ಹೇಳಿದರು.ಕಳೆದ ಬಾರಿ ವಿವಾದಕ್ಕೆ ಕಾರಣವಾಗಿದ್ದ ಸಮ್ಮೇಳನ ಅಧ್ಯಕ್ಷರಿಗೆ ನೀಡಲಾಗಿದ್ದ 11 ಲಕ್ಷ ರೂ. ನಗದು ಕಪ್ಪದ ಪದ್ಧತಿ ಈ ವರ್ಷ ಇರುವುದಿಲ್ಲ. ಸಮ್ಮೇಳನದ ಅಧ್ಯಕ್ಷರಿಗೆ ಬೆಲೆ ಕಟ್ಟುವ ಬದಲು, ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆ ಮೌಲ್ಯವನ್ನು ಕಟ್ಟುತ್ತೇವೆ. ಹಾಗಾಗಿ ಈ ಬಾರಿ ಯಾವುದೇ ರೀತಿಯಲ್ಲಿ ಗೌರವ ಧನ ಸಮರ್ಪಣೆ ಪದ್ಧತಿ ಇರುವುದಿಲ್ಲ ಎಂದರು.ಸಮ್ಮೇಳನದಲ್ಲಿ ಭರ್ಜರಿ ಭೂರಿ ಭೋಜನ ಇರುವುದಿಲ್ಲ. ಸಮ್ಮೇಳನಕ್ಕೆ ಬಂದವರಿಗೆಲ್ಲರಿಗೂ ಹೊಟ್ಟೆ ತುಂಬಾ ಊಟದ ವ್ಯವಸ್ಥೆ ಮಾಡಲಾಗುವುದು. ಸಮ್ಮೇಳನವೆಂಬುದು ಫ್ಯಾಷನ್‌ ಷೋ ಆಗಬಾರದು. ಅದು ಸಾಹಿತ್ಯ, ಸಂಸ್ಕೃತಿಯನ್ನು ಉಣಬಡಿಸುವ ಅಕ್ಷರ ಜಾತ್ರೆಯಾಗಬೇಕೆಂಬುದು ತಮ್ಮ ನಿಲುವು ಎಂದು ನಲ್ಲೂರು ಹೇಳಿದರು.ಲಾಂಛನ ಬಿಡುಗಡೆ ಮಾಡಿದ ಸಚಿವ ಆರ್‌. ಅಶೋಕ್‌, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ. ನಗರ ಜಿಲ್ಲಾ ವ್ಯಾಪ್ತಿಯ ಶಾಸಕರು, ಸಚಿವರು ಕೂಡ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಲಿದ್ದಾರೆಂದರು.ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿದೆ. ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನ ನಡೆಸಲು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಚಿಂತನೆ ನಡೆಸಿವೆ. ಬೆಂಗಳೂರಿನಲ್ಲಿರುವ ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸುವ ಕೆಲಸಕ್ಕೆ ಸಮ್ಮೇಳನ ನಾಂದಿ ಹಾಡಬೇಕು ಎಂದು ಹೇಳಿದರು.ಉದ್ಯೋಗವನ್ನು ಹುಡುಕಿಕೊಂಡು ಸಾಕಷ್ಟು ಮಂದಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರೆಲ್ಲರಿಗೂ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು. ಸಮ್ಮೇಳನದ ಮೂಲಕ ಬೆಂಗಳೂರಿನಲ್ಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮತ್ತಷ್ಟು ಪ್ರವರ್ಧಮಾನಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಬೆಂಗಳೂರಿನ ನಾಗರಿಕರು, ಸಾಹಿತ್ಯ ಪ್ರೇಮಿಗಳು, ಅಧಿಕಾರಿಗಳು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಜತೆ ಸಹಕರಿಸಬೇಕೆಂದು ಕೋರಿದರು.ಸಮ್ಮೇಳನದ ಸ್ವಾಗತ ಸಮಿತಿ ಸಂಚಾಲಕ ಅಶ್ವತ್ಥನಾರಾಯಣ, ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮೇಗೌಡ ಪಾಲ್ಗೊಂಡಿದ್ದರು