ಶುಕ್ರವಾರ, ನವೆಂಬರ್ 12, 2010

77ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಜಿ.ವಿ


ಬೆಂಗಳೂರು, ನ.10: ನಗರದಲ್ಲಿ ಡಿ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಘಂಟು ಪಿತಾಮಹ, 97ವರ್ಷದ ಜ್ಞಾನವೃದ್ಧ, ಸಾಹಿತಿ, .ಜಿ.ವೆಂಕಟಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರ ನೇತೃತ್ವದ ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಪ್ರೊ.ಜಿ.ವಿ ಅವರನ್ನು ಆರಿಸಲಾಯಿತು.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.24, 25 ಮತ್ತು 26ರಂದು 77ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕಾಗಿ ಹಂಪ ನಾಗರಾಜಯ್ಯ,ಚಿಮೂ, ಸಿಪಿಕೆ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿತ್ತು.

ಪ್ರೊ. ಜಿವಿ ಅವರು ನಾಡು ಕಂಡಿರುವ ಅತ್ಯುತ್ತಮ ಸಾಹಿತಿ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಇಷ್ಟು ವರ್ಷ ಅವರ ಯಾಕೆ ಆಗಿಲ್ಲ, ಅವರ ಆಯ್ಕೆ ವಿಳಂಬವಾಗಿದೆ ಎಂಬ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ. ನಾನು ಕಸಾಪಗೆ ಬಂದು ಎರಡು ವರ್ಷ ಆಯ್ತು. ಈ ಹಿಂದೆ ಅವರು ಯಾಕೆ ಅಧ್ಯಕ್ಷರಾಗಲಿಲ್ಲ ಎನ್ನುವುದಕ್ಕಿಂತ ಈಗ ಆಗಿರುವುದಕ್ಕೆ ಸಂತೋಷಪಡೋಣ ಎಂದು ಕಸಾಪ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಹೇಳಿದ್ದಾರೆ.

ಪ್ರೊ.ಜಿ.ವಿ ಕಿರು ಪರಿಚಯ: ಕನ್ನಡ ನಾಡು ಕಂಡ ಅತ್ಯುತ್ತಮ ಭಾಷಾ ತಜ್ಞ ಪ್ರೊ.ವೆಂಕಟಸುಬ್ಬಯ್ಯನವರು 1913ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮಹಾರಾಜ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ ಗಳಿಸಿದ ಕೀರ್ತಿ ಹೊಂದಿದ್ದಾರೆ. ನಂತರ ಉಪನ್ಯಾಸಕ ವೃತ್ತಿ ಆರಂಭಿಸಿದ ಅವರು ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದರು.

ಸುಮಾರು 25ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿರುವ ಪ್ರೊ.ಜಿವಿ ಅವರು ನಿಘಂಟು ತಜ್ಞರಾಗಿ ಎಲ್ಲರಿಗೂ ಪರಿಚಿತ. ಪ್ರಜಾವಾಣಿ ದಿನಪತ್ರಿಕೆಯ 'ಇಗೋ ಕನ್ನಡ' ಅಂಕಣ ಸಮಸ್ತ ಕನ್ನಡಿಗರ ಮನದಾಳದಲ್ಲಿದೆ. ವೆಂಕಟಸುಬ್ಬಯ್ಯ ಅವರು ಇಪ್ಪತ್ತು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಹತ್ತು ಸಂಪುಟಗಳನ್ನು ಹೊರತಂದಿದ್ದರು.

ಪ್ರೊ.ವೆಂಕಟಸುಬ್ಬಯ್ಯನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ,ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶಂಭಾ ಪ್ರಶಸ್ತಿ, ಸೇಡಿಯಾಪು, ಶಿವರಾಮ ಕಾರಂತ , ಮಾಸ್ತಿ ಹಾಗೂ ಪಂಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಟ್ರಸ್ಟ್ ನಿರ್ಮಾಣದ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದ 'ಸ್ತ್ಯುತ್ಯಂತರ' ಎಂಬ ಹೆಸರಿನ ಕಿರುಚಿತ್ರವನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದರಲ್ಲಿ ಪ್ರೊ.ಜಿ.ವಿ ಅವರ ಜೀವನಗಾಥೆಯ ಪರಿಚಯ ಸಿಗುತ್ತದೆ
ಕೃಪೆ:thatskannada