ಸೋಮವಾರ, ಅಕ್ಟೋಬರ್ 18, 2010

ಸಾಹಿತ್ಯ ಸಮ್ಮೇಳನ ಆಗ ನೆರೆ ಕಂಟಕ-ಈಗ ಸರ್ಕಾರಿ ಸಂಕಟ

ಕೃಪೆ:ಉದಯವಾಣಿ
ಬೆಂಗಳೂರು: ಡಿಸೆಂಬರ್‌ ಅಂತ್ಯದಲ್ಲಿ ನಾಡಪ್ರಭು ಕೆಂಪೇಗೌಡರ ರಾಜಧಾನಿಯಲ್ಲಿ ನಡೆಯಬೇಕಿದ್ದ 'ಕನ್ನಡಹಬ್ಬ' ಸಡಗರಕ್ಕೆ ಕಳೆದ ವಾರ ಉಲ್ಬಣಗೊಂಡಿದ್ದ 'ಸರ್ಕಾರಿ ಸಂಕಟ' ಮಂಕು ಕವಿಸಿದೆ.

ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಕಾಣಿಸಿದ ಭೀಕರ ನೆರೆ ಗದಗದಲ್ಲಿ ನಡೆಯಲಿದ್ದ 76ನೇ ಸಾಹಿತ್ಯ ಸಮ್ಮೇಳನಕ್ಕೆ ಕಂಟಕ ತಂದಿತ್ತು. ನಿಗದಿಯಾಗಿದ್ದ ದಿನಾಂಕ ಮುಂದೂಡಲ್ಪಟ್ಟಿತ್ತು. ಅಂತೂ ಇಂತೂ ಕಳೆದ ಡಿಸೆಂಬರ್‌ನಲ್ಲಿ ಅದ್ದೂರಿಯಾಗಿಯೇ ಕನ್ನಡ ನುಡಿಹಬ್ಬ ನಡೆದಿತ್ತು.

ನಲವತ್ತು ವರ್ಷಗಳ ತರುವಾಯ ಡಿಸೆಂಬರ್‌ ಅಂತ್ಯದಲ್ಲಿ ಬೆಂಗಳೂರಿನಲ್ಲಿ 77ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಸಜ್ಜಾಗಿತ್ತು. ಬೆಂಗಳೂರು ದಕ್ಷಿಣ ಜಿಲ್ಲೆಯ ಉಸ್ತುವಾರಿ ಸಚಿವರೂ, ಗೃಹ-ಸಾರಿಗೆ ಸಚಿವರೂ ಆಗಿರುವ ಆರ್‌. ಅಶೋಕ್‌ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯೂ ರಚನೆಯಾಗಿತ್ತು. ಬೆಂಗಳೂರಿನ ಎಲ್ಲಾ ಶಾಸಕರ ಸಮ್ಮುಖದಲ್ಲಿ ಪೂರ್ವಸಿದ್ಧತಾ ಸಭೆಯನ್ನು ವಿಧಾನಸೌಧದಲ್ಲಿ ನಡೆಸಲಾಗಿತ್ತು.

ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮ್ಮೇಳನದ ಮುಖ್ಯವೇದಿಕೆ, ಗಾಯನ ಸಮಾಜ, ಕಿಮ್ಸ್‌ನ ಕುವೆಂಪು ಕಲಾಕ್ಷೇತ್ರ, ಜೈನ್‌ಭವನಗಳಲ್ಲಿ ಪರ್ಯಾಯ ವೇದಿಕೆಗಳಲ್ಲಿ ಕಾರ್ಯಕ್ರಮ ನಡೆಸಲು ಚಿಂತನೆ ನಡೆದಿತ್ತು. ಸಮ್ಮೇಳನದಲ್ಲಿ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳು, ಯಾವ್ಯಾವ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಿಗದಿಯಾಗಲು ಕನಿಷ್ಠ 2 ತಿಂಗಳಾದರೂ ಸಿದ್ಧತೆ ಅಗತ್ಯ. ಈ ಹಿನ್ನೆಲೆಯಲ್ಲಿ ಕಸಾಪ ಕಚೇರಿ ಚುರುಕಿನ ಕಾರ್ಯಾಚರಣೆಯಲ್ಲಿ ನಿರತವಾಗಿತ್ತು.

ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯಲ್ಲಿ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿ 3 ಕೋಟಿ, ಬೆಂಗಳೂರಿನ ಎಲ್ಲಾ ಶಾಸಕರ ಒಂದು ತಿಂಗಳ ಸಂಬಳ, ಸರ್ಕಾರಿ ನೌಕರರ ಸಂಬಳ ಸೇರಿ ಸರಿಸುಮಾರು 2ಕೋಟಿ ರೂ.ಗಳು ಸಮ್ಮೇಳನಕ್ಕೆ ಅನುದಾನ ಒದಗುವ ನಿರೀಕ್ಷೆಯಿತ್ತು. ರಾಜಧಾನಿಯಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಬರೋಬ್ಬರಿ 5 ಕೋಟಿ ರೂ. ಹೆಚ್ಚಿನ ಮೊತ್ತ ಸಿಗುವ ಅಂದಾಜಿತ್ತು.


ಸರ್ಕಾರಿ ಸಂಕಟ:

ಹಿಂದೆಂದೂ ಕಂಡರಿಯದಂತೆ ಸಮ್ಮೇಳನ ನಡೆಸಲು ಸಾಹಿತ್ಯ ಪರಿಷತ್ತು ಮೈಕೈಕೊಡವಿಕೊಂಡು ನಿಂತ ಹೊತ್ತಿನಲ್ಲೇ ಅ.5ರಂದು 'ಸರ್ಕಾರಿ ಸಂಕಟ' ಶುರುವಾಯಿತು. ಬಿಜೆಪಿ 11 ಶಾಸಕರು, ಪಕ್ಷೇತರ 5 ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಿದ ಬೆಂಬಲ ಹಿಂಪಡೆಯುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದಾಕ್ಷಣ ಸಾಹಿತ್ಯ ಸಮ್ಮೇಳನದ ಮೇಲೆ ಕಾರ್ಮೋಡ ಆವರಿಸಿತು.

ಸಮ್ಮೇಳನದ ಕಡೆಗೆ ಭರದಿಂದ ಸಾಗುತ್ತಿದ್ದ ಸಾಹಿತ್ಯ ಪರಿಷತ್ತಿನ ತಂಡಕ್ಕೆ ದಿಢೀರ್‌ 'ಬ್ರೇಕ್‌ಫೇಲ್‌'ಆದ ಅನುಭವವಾಗಿದ್ದಂತೂ ಸತ್ಯ. ಹಳಿ ತಪ್ಪಿದ್ದ ಸರ್ಕಾರಿ ರೈಲು ಅಂತೂ ಇಂತೂ ಹಳಿ ಮೇಲೆ ನಿಂತು ಸರಾಗವಾಗಿ ನಡೆಯಲು ಆರಂಭಿಸಿದ್ದರಿಂದಾಗಿ ಒಂದಿನಿತು ಸಮಾಧಾನ ಕಾಣಿಸಿಕೊಂಡಿತಾದರೂ ಬ್ರೇಕ್‌ಫೇಲ್‌ನಿಂದಾಗ ಆಘಾತದಿಂದ ಸಾಹಿತ್ಯ ಪರಿಷತ್ತಿನ ಮುಂದಾಳುಗಳು ಚೇತರಿಸಿಕೊಂಡಿಲ್ಲ.

ಸರ್ಕಾರ ಒಂದು ಮಟ್ಟಿಗೆ ಸ್ಥಿರಗೊಂಡಿದ್ದರೂ ಅದರ 'ಸುಸ್ಥಿರತೆ'ಯ ಸಂಶಯ ಇನ್ನೂ ಪರಿಹಾರವಾಗಿಲ್ಲ. ಪ್ರತಿಪಕ್ಷದವರ ರಾಜಕೀಯ ನಡೆಗಳು, ಆಡಳಿತ ಪಕ್ಷದಲ್ಲಿ ಸಂಪೂರ್ಣವಾಗಿ ಶಮನವಾಗದ ಭಿನ್ನತೆಯ ಬೆಂಕಿ ತಥಾಕಥಿತವಾಗಿ ಮುಂದುವರೆದಿವೆ. ಯಡಿಯೂರಪ್ಪ ಮತ್ತೂಮ್ಮೆ ಸಂಪುಟ ಪುನಾರಚನೆ ಮಾಡಿದರೆ ಸರ್ಕಾರದೊಳಗಿನ ಭಿನ್ನಮತದ ದಾವಾಗ್ನಿ ಮತ್ಯಾರನ್ನು ಬಲಿತೆಗೆದುಕೊಳ್ಳಲಿದೆಯೋ ಗೊತ್ತಿಲ್ಲ.

ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಸಾಹಿತ್ಯ ಸಮ್ಮೇಳನದ ಸಿದ್ಧತೆಯ ಮೇಲೆ ನಿರುತ್ಸಾಹದ ಪರದೆಯನ್ನು ಎಳೆದಿವೆ. ಮೊದಲಿದ್ದ ಹುಮ್ಮಸ್ಸು ಸಾಹಿತ್ಯ ವಲಯದಲ್ಲಿ ಕಾಣಸುತ್ತಿಲ್ಲ. ಯಾವಾಗ ಏನಾಗುವುದೋ ಎಂಬ ಆತಂಕ, ಅನುಮಾನದ ಮಧ್ಯೆಯೇ ಸಮ್ಮೇಳನ ನಡೆಸುವ ಅನಿವಾರ್ಯತೆಗೆ ಸಮ್ಮೇಳನದ ರೂವಾರಿಗಳು ದೂಡಲ್ಪಟ್ಟಿದ್ದಾರೆ.

ಮಂಗಳವಾರ ಮತ್ತೂಂದು ಸುತ್ತಿನ ಸಭೆ
ಡಿಸೆಂಬರ್‌ನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಮತ್ತೂಂದು ಸುತ್ತಿನ ಸಭೆ ಮಂಗಳವಾರ ನಡೆಯಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಆರ್‌. ಅಶೋಕ್‌ ಅಧ್ಯಕ್ಷತೆಯಲ್ಲಿ ಕಸಾಪ ಪದಾಕಾರಿಗಳು, ಶಾಸಕರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಲಿದ್ದಾರೆ. ಸಮ್ಮೇಳನದ ಬಹುಮುಖ್ಯ ಸಂಗತಿಗಳಲ್ಲೊಂದಾದ ಅಧ್ಯಕ್ಷರ ಆಯ್ಕೆಯನ್ನು ನಿರ್ಧರಿಸಲಿರುವ ಕಸಾಪ ಕಾರ್ಯಕಾರಿ ಸಮಿತಿಯ ಸಭೆಯ ದಿನಾಂಕವೂ ಅಂದೇ ತೀರ್ಮಾನವಾಗಲಿದೆ. ಸರ್ಕಾರಿ ಸಂಕಟ ಸಮ್ಮೇಳನಕ್ಕೆ ಹಿನ್ನಡೆ ತಂದುಕೊಟ್ಟಿದ್ದರೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಲ್ಲಲಿದ್ದಾರೆ ಕಸಾಪ ಪದಾಕಾರಿಗಳು.

ಗುರುವಾರ, ಅಕ್ಟೋಬರ್ 14, 2010

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?