ಶನಿವಾರ, ನವೆಂಬರ್ 27, 2010

ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಬೆಂಗಳೂರು, ನ.27: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳ ಹಿನ್ನೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಗೃಹ ಸಚಿವ ಆರ್ ಅಶೋಕ್ ಶನಿವಾರ (ನ.27) ಘೋಷಿಸಿದ್ದಾರೆ. 

ವಿಧಾನ ಸೌಧದದಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ಆರ್ ಅಶೋಕ್, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಹಿನ್ನೆಯಲ್ಲಿ ಜನವರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ. ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು. 

ಡಿಸೆಂಬರ್ 24ರಿಂದ ಮೂರು ದಿನಗಳ ಕಾಲ ಬೆಂಗಳೂರು ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ಧತೆಗಳು ನಡೆದಿದ್ದವು. ಅಷ್ಟರಲ್ಲೇ ದಿಢೀರ್ ಎಂದು ಸಾಹಿತ್ಯ ಸಮ್ಮೇಳನ ಮುಂದೂಡುವ ಘೋಷಣೆ ಹೊರಬಿದ್ದಿದೆ. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. 

ರಾಜಕೀಯವೇ ಬೇರೆ ಸಾಹಿತ್ಯವೇ ಬೇರೆ ಹೀಗಿದ್ದೂ ಈ ನಿರ್ಧಾರ ಏಕೆ ಎಂಬ ಪ್ರಶ್ನೆಗೆ ಸಚಿವರು ಉತ್ತರ ಹೀಗಿತ್ತು. ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿಲ್ಲ ಎಂದು ಹೇಳುತ್ತಿಲ್ಲ. ಸ್ವಲ್ಪ ತಡವಾಗಿ ನಡೆಸಲಿದ್ದೇವೆ. ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನ ಕಳೆಗುಂದಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಕೃಪೆ:thatskannada

ಬುಧವಾರ, ನವೆಂಬರ್ 24, 2010

ಸಾಹಿತ್ಯ ಸಮ್ಮೇಳನ: ‘ನಮ್ಮತನ’ವೇ ಈ ಬಾರಿಯ ವಿಶೇಷ

ಬೆಂಗಳೂರು: ನಾಲ್ಕು ದಶಕದ ನಂತರ ರಾಜಧಾನಿಯಲ್ಲಿ ನಡೆಯುತ್ತಿರುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಷಯಾಧಾರಿತವಾಗಿ ನಡೆಸುವ ಪ್ರಯತ್ನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಸಕ್ತಿ ವಹಿಸಿದೆ.
ಸಮ್ಮೇಳನದ ಗೋಷ್ಠಿಗಳು ಕಳೆದು ಹೋಗುತ್ತಿರುವ ನಮ್ಮ ತನದ ಬಗ್ಗೆ ತಿಳಿ ಹೇಳುವ ದಪ್ಪ ದನಿಯಾಗಬೇಕೆಂಬ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎನ್ನುತ್ತಾರೆ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್.
ಕೃಷಿ ವ್ಯವಸ್ಥೆ ಅಸಮತೋಲನವಾಗಿದೆ, ಗ್ರಾಮೀಣ ಬದುಕು ತಲ್ಲಣವಾಗಿದೆ, ನಗರ ಆಕರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಸಾಯ ಸಂಸ್ಕೃತಿ ಕರಗುತ್ತಿದೆ, ಬೇಸಾಯಗಾರರ ಬದುಕು ಬೆಂದು ಹೋಗುತ್ತಿದೆ. ವಿದ್ಯಾವಂತರಲ್ಲದವರೂ ನಗರವಾಸಿಗಳಾಗುತ್ತಿದ್ದಾರೆ. ಹೀಗಾದರೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತೇವೆ. ಈ ದೃಷ್ಟಿಯಿಂದ ನೆಲದ ಬಗ್ಗೆ ಆಪ್ತತೆ ಮೂಡಿಸುವ ಉದ್ದೇಶದಿಂದ ದೇಸಿ ಸಂಸ್ಕೃತಿ ಮತ್ತು ತಲ್ಲಣ ಕುರಿತು ವಿಶೇಷ ಗೋ ಷ್ಠಿ ನಡೆಯಲಿದೆ ಎಂದು ನಲ್ಲೂರು ವಿವರಿಸುತ್ತಾರೆ.
ಹಾಗೆಯೇ ಪರಂಪರಾಗತ ಕೃಷಿ ಅಪಾಯದ ಅಂಚಿನಲ್ಲಿದೆ. ರಾಸಾಯನಿಕದ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪರಂಪರಾಗತ ಅಥವಾ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋಷ್ಠಿ ನಡೆಯಲಿದೆ.
ಮತ್ತೊಂದು ಮುಖ್ಯ ಅಂಶವೆಂದರೆ ಮಾನವ ಹಕ್ಕುಗಳು, ಮಾಹಿತಿ ಹಕ್ಕು, ಮಹಿಳಾ ಹಕ್ಕುಗಳ ಬಗ್ಗೆಯೇ ಗೋಷ್ಠಿಯೊಂದು ನಡೆದು ಈ ಬಗ್ಗೆ ಜಾಗೃತಿ ಮೂಡಿಸಲಿದೆ.
ಉಳಿದಂತೆ ಕಾನೂನು ಮತ್ತು ಕನ್ನಡ, ರಂಗಭೂಮಿಯ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ ದೆ. ಒಟ್ಟಾರೆಯಾಗಿ ಆಧುನಿಕತೆಯ ಅವಾಂತರದಿಂದ ಕಳೆದುಕೊಳ್ಳುತ್ತಿರುವ ನಮ್ಮತನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಗೋಷ್ಠಿಯ ಉದ್ದೇಶವಾಗಿರಬೇಕೆಂಬ ಕಲ್ಪನೆ ಇದೆ ಎಂದು ನಲ್ಲೂರು ತಿಳಿಸುತ್ತಾರೆ.
ಬೆಂಗಳೂರಿಗಾಗಿ ಒಂದು ಗೋಷ್ಠಿ: ಭವಿಷ್ಯದ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ದೂರದೃಷ್ಟಿ ನೀಡುವಂತಹ ಮತ್ತು ಸೂಕ್ತ ಮುಂಜಾಗ್ರತೆ ವಹಿಸುವ ಸಲಹೆಗಳನ್ನು ನೀಡುವ ಉದ್ದೇಶದಿಂದ ವಿಶೇಷ ಗೋಷ್ಠಿ ನಡೆಯುತ್ತಿದೆ.
ಐತಿಹಾಸಿಕ ಬೆಂಗಳೂರು, ವರ್ತಮಾನದ ಬೆಂಗಳೂರು ಮತ್ತು ನಾಳಿನ ಬೆಂಗಳೂರು ಕುರಿತು ನಡೆಯುವ ಗೋಷ್ಠಿ ವಿಶೇಷ ಗಮನ ಸೆಳೆಯಲಿದೆ ಎಂದೇ ಅಂದಾಜಿಸಲಾಗಿದೆ.
ಬೆಂಗಳೂರಿನ ಸ್ವರೂಪ ಬದಲಾಗಿದ್ದು, ಐಟಿ, ಬಿಟಿ ಬೆಳೆದು ಬಂದಿದ್ದು, ಬಹುಮಹಡಿ ಕಟ್ಟಡಗಳು ನೆಲೆ ನಿಂತಿದ್ದು, ಸಂಚಾರ ಸಮಸ್ಯೆಗಳು ಗೋಷ್ಠಿಯಲ್ಲಿ ಬೆಳಕು ಚೆಲ್ಲಲಿವೆ. ಜೊತೆಗೆ ಮುಂದೆ ‘ಅದ್ಭುತ ಬೆಂಗಳೂರು’ ಹೇಗಿರಬೇಕೆಂದು ಕನ್ನಡ ಸಾಹಿತ್ಯ ಸಮ್ಮೇಳನ ಕನಸು ಕಟ್ಟಲಿದೆ. ಇದರ ಲ್ಲಿ ಅಧಿಕಾರಿಗಳನ್ನು ತೊಡಗಿಸಿಕೊಳ್ಳಬೇಕೆಂಬ ಉದ್ದೇಶವಿದೆ.
ಕೃಪೆ:ಗ.ಕ 

77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಕೋಟಿ, ರನ್ನ ಪ್ರತಿಷ್ಠಾನಕ್ಕೆ 12 ಲಕ್ಷ ರೂ ಅನುದಾನ

ಬೆಂಗಳೂರು: ಮುಂದಿನ ತಿಂಗಳ 24 ರಿಂದ ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ 77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರ ಜೋಳ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರಿಗೆ ಒಂದು ಕೋಟಿ ರೂಪಾಯಿ ಚೆಕ್ ನೀಡಿದರು.
41 ವರ್ಷಗಳ ನಂತರ ನಗರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ 80 ಸಾವಿರ ಜನ ಭಾಗವಹಿ ಸುವ ನಿರೀಕ್ಷೆ ಇದೆ. ಇದಲ್ಲದೆ ಸುಮಾರು 20 ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಅವರಿ ಗೆಲ್ಲ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಕಾರಜೋಳ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಸಮ್ಮೇಳನ ನಡೆಯಲಿದ್ದು, ಪ್ರತಿನಿಧಿಗಳಿಗೆ 250 ರೂಪಾ ಯಿ ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ.ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿ ಗಳಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಕನ್ನಡ ಭವನದ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಮತ್ತು ಬಿಬಿಎಂಪಿ ಮಾಡಲಿದೆ ಎಂದರು.
ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ನುಡಿ ತೇರು’ ಉತ್ಸವ ನಡೆಯಲಿದ್ದು, ನಗರದ ಎಲ್ಲ ಬಡಾವಣೆಗಳಲ್ಲಿ ಸಮ್ಮೇಳನದ ಕಂಪನ್ನು ಬಿಂಬಿಸುವ ವಾತಾವರಣ ನಿರ್ಮಾಣ ಮಾಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ರನ್ನ ಪ್ರತಿಷ್ಠಾನಕ್ಕೆ 12 ಲಕ್ಷ
ಕನ್ನಡದ ರತ್ನತ್ರಯರಲ್ಲಿ ಒಬ್ಬರಾದ ‘ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ’ವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ವರ್ಷ 12 ಲಕ್ಷ ರೂಪಾಯಿ ಅನುದಾನವನ್ನು ಪ್ರತಿಷ್ಠಾನಕ್ಕೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಮಂಗಳ ವಾರ ಇಲ್ಲಿ ತಿಳಿಸಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ‘ಪ್ರಜಾವಾಣಿ’ಯ ಸಹ ಸಂಪಾದಕ ಪದ್ಮರಾಜ ದಂಡಾವತಿ, ಮುಧೋಳದ ಎಚ್.ವೈ.ಕಾತರಕಿ, ಲೋಕಾಪುರದ ಎಸ್.ಬಿ. ಕೃಷ್ಣೇ ಗೌಡ, ಪ್ರಾಧ್ಯಾಪಕ ಶಂಭು ಬಳಿಗಾರ ಪ್ರತಿಷ್ಠಾನದ ಅಧಿಕಾರೇತರ ಸದಸ್ಯರಾಗಿದ್ದಾರೆ.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾರ್ಯನಿರ್ವಾಹಕ ಎಂಜಿನಿಯರ್ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಾಹಿತ್ಯ ಚಟುವಟಿಕೆಗಳಿಗಾಗಿ ಅನುದಾನ ನೀಡಲಾಗುತ್ತದೆ. ರನ್ನನ ಜನ್ಮಸ್ಥಳ ಮುಧೋಳದಲ್ಲಿರುವ ಸ್ಮಾರಕ ಭವನದ ಉಸ್ತುವಾರಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಪ್ರತಿಷ್ಠಾನಕ್ಕೆ ನೀಡ ಲಾಗುವುದು ಎಂದರು.
ಕೃಪೆ:ಗ.ಕ 

ಶುಕ್ರವಾರ, ನವೆಂಬರ್ 12, 2010

ಮಕ್ಕಳಿಗೆ ಕನ್ನಡ ಕಲಿಸಿ: 77ನೇ ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೊ|ಜಿ.ವೆಂಕಟಸುಬ್ಬಯ್ಯ ಅವರೊ೦ದಿಗೆ ನೇರ ಸ೦ದರ್ಶನ

ಸಂದರ್ಶನ: ಶ್ರೀಕಾಂತ್ ಭಟ್

ನನ್ನ ಅದೃಷ್ಟ ಚೆನ್ನಾಗಿದೆ. ಮನಸ್ಸಿಗೂ ಸಂತಸವಾಗಿದೆ. ಪದವಿಗಿಂತ ಇನ್ನೇನು ದೊಡ್ಡದಿದೆ. ಗೌರವ ನಾನು ನಿರೀಕ್ಷಿಸಿರಲಿಲ್ಲ...
ಇದು ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊಜಿ.ವೆಂಕಟಸುಬ್ಬಯ್ಯ ಅವರ ವಿನೀತ ಅಭಿಪ್ರಾಯ.
ಲಕ್ಷ್ಮೀನಾರಾಯಣ ಭಟ್ಟರ ಹೊಸ ಪುಸ್ತಕ ಓದುತ್ತಾ ಕುಳಿತಿದ್ದೆ. ಆಗ ದೂರವಾಣಿ ಕರೆಯಲ್ಲಿ ಯಾರೊ ಒಬ್ಬರು ನೀವು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದೀರಾ ಎಂದು ತಿಳಿಸಿದರು. ನನಗೆ ಆಶ್ಚರ್ಯವಾಯಿತು. ಇಂದು ಸಭೆ ನಡೆಯುತ್ತಿದೆ ಎಂದೂ ನನಗೆ ಗೊತ್ತಿರಲಿಲ್ಲ ಎಂದು ಜಿ.ವಿ. ತಿಳಿಸಿದರು.
ಕನ್ನಡದ ಬಗ್ಗೆ ಚಿಂತೆ ನಿಮ್ಮನ್ನು ಕಾಡಿದಿದ್ದೆಯೇ?

-ಸಮ್ಮೇಳನ ಅಧ್ಯಕ್ಷನಾದ ಸಂದರ್ಭದಲ್ಲಿ ಮತ್ತು ಬೆಂಗಳೂರಲ್ಲಿ ಸಮ್ಮೇಳನ ನಡೆಯುತ್ತಿರುವಾಗ ಯೋಚಿಸಬೇಕಾದ ಅನೇಕ ಸಂಗತಿಗಳು ಇವೆ. ಶೇ.೨೦ರಷ್ಟು ಮಾತ್ರ ಕನ್ನಡಿಗರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಕಾಣುತ್ತಿದೆ. ಇದು ಕನ್ನಡಕ್ಕೆ ಅಪಾಯ. ಇದನ್ನು ಸರಿಪಡಿಸುವ ಮಾರ್ಗ ತೋರುವ ಕೆಲಸ ನನ್ನಿಂದಾಗಬೇಕು ಎಂದು ಅಪೇಕ್ಷಿಸುತ್ತೇನೆ. ಕೈಲಾದ ಪ್ರಯತ್ನವನ್ನೂ ಮಾಡುತ್ತೇನೆ.

ಬೆಂಗಳೂರು ಕನ್ನಡ ಹೋರಾಟದ ಬಗ್ಗೆ ಏನೆನ್ನುತ್ತೀರಾ?
-ಇಂದು ಪ್ರಚಾರಕ್ಕಾಗಿ ಕನ್ನಡ ಪರ ಹೋರಾಟಗಳು ನಡೆಯುತ್ತಿವೆ. ಆಂದೋಲನ ಮಾಡುವ ಹೆಸ ರಲ್ಲಿ ತಮ್ಮ ಛಾಯಾಚಿತ್ರವನ್ನು ರಸ್ತೆ ರಸ್ತೆಯಲ್ಲಿ ಪ್ರಚಾರ ಮಾಡುತ್ತಾರೆ. ಇದರ ಉದ್ದೇಶವೇನೋ ಅರ್ಥವಾಗದು. ಹಾಗೆಯೇ ಕಿರುಚಾಟ ನಡೆಸಿದರೆ ಕನ್ನಡ ಉಳಿಯದು ಎಂಬುದನ್ನು ಮುಖಂಡರು ಅರಿಯಬೇಕು.

ಕನ್ನಡ ಉಳಿಯಲು ನಿಮ್ಮ ಸಲಹೆ ಏನು?

-ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಂಬಳ ಬರಬಹುದು, ಬರಲಿ.
ಆದರೆ ಅವರು ಕನ್ನಡ ಪ್ರೇಮ ಉಳಿಸಿಕೊಳ್ಳಬೇಕು. ದೇಶದಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆ ಬಾರದು, ವಿಚಾರದಲ್ಲಿ ಹೆದರಬೇಕಾಗಿಲ್ಲ. ಬೆಂಗಳೂರಿನಲ್ಲಿ ಮಾತ್ರ ಪರಭಾಷಿಗರು ತುಂಬಿ ಹೋಗಿದ್ದಾರೆ. ಅವರು ಕನ್ನಡ ಮಾತನಾಡಬೇಕು, ಕನ್ನಡಿಗರಾಗಬೇಕು ಎಂಬುದು ನನ್ನ ಆಶಯ. ಇದಕ್ಕಾಗಿ ಭಾಷೆ ಉಳಿಸಲು ಎರಡು ಉಪಾಯವನ್ನೂ ಹೇಳಿಕೊಡುವೆ.

ಶಿಕ್ಷಣ- ಉದ್ಯೋಗದಲ್ಲಿ ಕನ್ನಡದ ಪಾತ್ರ ಏನಾಗಬೇಕು?

ನಲಿಕಲಿ ಅಪಾಯ. ಪ್ರಾಥಮಿಕ ಶಿಕ್ಷಣದಲ್ಲಿ ವ್ಯವಸ್ಥೆ ಬದಲಿಸಬೇಕೆಂಬುದನ್ನು ನಾನು ಹೇಳುತ್ತೇ ನೆ. ಅಪಾಯಕಾರಿ ಶಿಕ್ಷಣ ಪದ್ದತಿಯನ್ನು ಕೈಬಿಡುವುದೇ ಸೂಕ್ತ ಎಂಬುದು ಭಾವನೆ. ಕನ್ನಡ ಮಾಧ್ಯಮ ಓದಿದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೊದಲ ಆದ್ಯತೆ ಎಂದು ಸರ್ಕಾರ ಘೋಷಿ ಸಿದರೆ ಆಗ ಕನ್ನಡಕ್ಕೆ ತನ್ನಿಂತಾನೆ ಮಾನ್ಯತೆ ದೊರೆಯುತ್ತದೆ. ಸರೋಜಿನಿ ಮಹಿಷಿ ವರದಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂಬುದೇ ನನ್ನ ಆಗ್ರಹ.

ಇಂಗ್ಲಿಷ್ ಬಗ್ಗೆ ನಿಮ್ಮ ಅಭಿಪ್ರಾಯ? ಕನ್ನಡ ಮನೆ ಹೇಗಾಗಬೇಕು?

ಇಂಗ್ಲಿಷ್ ವಿರೋಧಿಸಿ ಎಂದು ನಾನು ಹೇಳಲಾರೆ. ಆದರೆ ಇಂಗ್ಲಿಷ್, ಸ್ಪಾನಿಷ್, ಪೋರ್ಚುಗೀಸ್ ಭಾಷೆಗಳು ಕೊಲೆಕಡುಕ ಭಾಷೆಗಳು. ಇವುಗಳ ಪ್ರಭಾವ ಎಷ್ಟೆಂದರೆ ಇನ್ನೊಂದು ಭಾಷೆಯನ್ನು ಮುಳುಗಿಸುವಷ್ಟು ಶಕ್ತಿ ಇವೆ. ಬೆಂಗಳೂರಿನಲ್ಲಿರುವ ಎಲ್ಲಾ ಭಾಷಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ೧೦ನೇ ತರಗತಿವರೆಗೆ ಪ್ರಥಮ ಭಾಷೆ ಕನ್ನಡ ಭಾಷೆ ಇರುವಂತೆ ನೋಡಿಕೊಳ್ಳಬೇಕು. ಆಗ ಕನ್ನಡತನ ಉಳಿಯಲು ಸಾಧ್ಯ. ವಯಸ್ಸಾದವರಿಗೆ ಕನ್ನಡ ಹೇಳಿಕೊಡುವ ಬದಲು ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಟ್ಟರೆ ಮನೆಗಳೆಲ್ಲಾ ಕನ್ನಡ ಮನೆಗಳಾಗುತ್ತವೆ.

ಪರಿಷತ್, ನಿಮ್ಮ ನಡುವಿನ ಸಂಬಂಧ?

ಪರಿಷತ್ ಸಾಯುತ್ತಿದ್ದಾಗ ಬದುಕಿಸಿದೆ. ಅಧ್ಯಕ್ಷನಾಗಿ ಬಂದಾಗ ಅಲ್ಲಿನ ಸಿಬ್ಬಂದಿಗೆ ಸಂಬಳ ಕೊಡ ಲು ಕಷ್ಟವಾಗಿತ್ತು. ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರನ್ನು ಕೇಳಿಕೊಂಡೆ, ಹೆಗಡೆ ವರ್ಷಕ್ಕೆ ರು. ೨೫,೦೦೦ ಬರುವಂತೆ ಮಾಡಿ ಕಸಾಪ ಬದುಕಿಸಿದರು. ಕಸಾಪ ಎಣೆ ಇಲ್ಲದೇ ಬೆಳೆ ಯಬೇಕೆಂದು ಆಸೆ ಪಟ್ಟವನು ನಾನು. ಈಗ ಸಮಾಧಾನ ತಂದುಕೊಟ್ಟಿದೆ. ನಿಘಂಟು ಖುಷಿಕೊಟ್ಟ ಸಂಗತಿ.

ಮನೆ ಮತ್ತು ನಿಮ್ಮ ಕಾಯಕ ಹೇಗಿತ್ತು?

ಹೆಂಡತಿ ಮಾಡಿದ ಅಡುಗೆ ಉಪ್ಪುಕಾರದಿಂದ ಇಷ್ಟೆಲ್ಲಾ ಸಾಧ್ಯವಾಗಿದೆ ಎಂದು ಹೇಳುತ್ತೇನೆ. ಸಾಹಿತ್ಯ ಕ್ಷೇತ್ರಕ್ಕೆ ನನ್ನಿಂದೇನಾದರೂ ಕೊಡುಗೆ ಸಿಕ್ಕಿದೆ ಎಂದರೆ ಅದರಲ್ಲಿ ಇವಳದ್ದೂ ಪಾಲಿದೆ. ಮನೆಯನ್ನು ಈಕೆ ಅಚ್ಚುಕಟ್ಟಾಗಿ ನೋಡಿಕೊಳ್ಳದೇ ಇದ್ದರೆ ನನ್ನಿಂದ ಇಷ್ಟೆಲ್ಲಾ ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ. ನನ್ನ ಕೆಲಸಕ್ಕೆ ಸಾಕಷ್ಟು ಸಹಕಾರ ನೀಡಿದ್ದಾಳೆ.

ಇಂದಿಗೂ ಪಾಠ ಒಪ್ಪಿಸುವ ಶಿಷ್ಯರು!

ವೆಂಕಟಸುಬ್ಬಯ್ಯ ಅವರಿಗೆ ಈಗ ೯೮ರ ಹರೆಯ. ಸಂದರ್ಭದಲ್ಲೂ ಅವರ ಹಳೆ ಶಿಷ್ಯರು ಗುರು ವಿಗೆ ಪಾಠವನ್ನೊಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಆಶ್ಚರ್ಯ ಸಂಗತಿಯನ್ನು ಹೊರಹಾಕಿದ್ದು ಜಿ.ವಿ. ಅವರೇ. ನನ್ನ ಶಿಷ್ಯರು ಈಗಲೂ ಮನೆಗೆ ಬರುತ್ತಾರೆ. ಅವರೆಲ್ಲಾ ಪ್ರೊಫೆಸರ್ಗಳು, ಉಪ ನ್ಯಾಸಕರು ಇತ್ಯಾದಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಮನೆಗೆ ಬಂದಾಗ ಎಲ್ಲರೂ ನನ್ನ ಪಾಠವನ್ನು ನೆನಪಿಸುತ್ತಾರೆ. ಆಗ ನಾನು ಅವರಿಗೆ ಹಾಗಾದರೆ ಪಾಠ ಒಪ್ಪಿಸಿ ಎಂದು ಹೇಳು ವೆ. ಶಿಷ್ಯರೆಲ್ಲ ೨೦-೨೫ ಪದ್ಯಗಳನ್ನು ತಂದು ಒಪ್ಪಿಸುವ ಪರಿಪಾಠ ಇಂದಿಗೂ ಇದೆ ಎಂದು ಜಿ.ವಿ. ವಿವರಿಸಿದರು.

ನಿದ್ದೆ ಬಾರದು: ಪ್ರತಿ ದಿನ ಕುಮಾರವ್ಯಾಸನ ಒಂದು ಸಂಧಿಯನ್ನಾದರೂ ಓದದಿದ್ದರೆ ನನಗೆ ನಿದ್ದೆಯೇ ಬಾರದು ಎಂದು ವೆಂಕಟಸುಬ್ಬಯ್ಯ ಹೇಳುತ್ತಾರೆ. ಪ್ರತಿ ದಿನ ಬೆಳಗ್ಗೆ ೯ರಿಂದ ಗಂಟೆ ಕಾಲ ಪತ್ರ ವ್ಯವಹಾರಕ್ಕೆ ಮೀಸಲಿಡುತ್ತೇನೆ. ಎಲ್ಲೆಡೆಯಿಂದ ಪತ್ರಗಳು ಬರುತ್ತವೆ. ಅವುಗಳಿಗೆ ಅಂದೇ ಉತ್ತರಿಸಿ ಕಳುಹಿಸಿಬಿಡುತ್ತೇನೆ. ಮಧ್ಯಾಹ್ನ ಗಂಟೆ ನಂತರ ಹೆಂಡತಿ ಜೊತೆ ಮಾತ ನಾಡಲು ಸಮಯ ಮೀಸಲಿಟ್ಟಿದ್ದೇನೆ. ಸಂಜೆ ೪ರಿಂದ ಗಂಟೆವರೆಗೆ ಹಳೇ ವಿದ್ಯಾರ್ಥಿಗಳು ಮತ್ತು ಅತಿಥಿಗಳಿಗೆ ಸಮಯ ಮೀಸಲಿಟ್ಟಿದ್ದೇನೆ ಎಂದು ತಮ್ಮ ದಿನಚರಿಯನ್ನು ವಿವರಿಸಿದರು.

ಹಳೇ ನೆನಪು: ಶ್ರೀರಂಗಪಟ್ಟಣದ ಗಂಜಾಂನಲ್ಲಿ ನಮ್ಮ ಮನೆ ಇತ್ತು. ತಂದೆ ಜಿ.ತಿಮ್ಮಣ್ಣಯ್ಯ ಶಿಕ್ಷಕರಾಗಿದ್ದರು. ೧೦೭ ವರ್ಷ ಬದುಕಿದ್ದ ಅವರು ಕಾವ್ಯಗಳನ್ನು ರಚಿಸಿದ್ದಾರೆ ಎಂದು ತಮ್ಮ ಹಳೆಯ ನೆನಪನ್ನು ಬಿಚ್ಚಿಟ್ಟರು. ನಾನು ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದೆ. ಕಾವೇರಿಯ ಅಂಗಳ ದಲ್ಲೇ ಆಡಿ ಬೆಳೆದವನು ಎಂದರು ಜಿ.ವಿ.

ವಯಸ್ಸಾದವರಿಗೆ ಕನ್ನಡ ಹೇಳಿಕೊಡುವ ಬದಲು ನಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಟ್ಟರೆ ಮನೆಗಳೆಲ್ಲಾ ಕನ್ನಡ ಮನೆಗಳಾಗುತ್ತವೆ. -ಜಿ.ವೆಂಕಟಸುಬ್ಬಯ್ಯ

ಅವರು ಮಾಡಿದ ಕೆಲಸಕ್ಕೆ ಗೌರವ ಸಿಕ್ಕಿದೆ. ತುಂಬಾ ಖುಷಿಯಾಗುತ್ತಿದೆ. -ಲಕ್ಷ್ಮಿ, ಜಿ.ವಿ. ಪತ್ನಿ



ಸಮ್ಮೇಳನಕ್ಕೆ ಹಿರಿಯ ಜೀವಿ

ಬೆಂಗಳೂರು .ಭಾ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾನುಮತದ ಆಯ್ಕೆ
ಬೆಂಗಳೂರು: ಕನ್ನಡದನಿಘಂಟು ಬ್ರಹ್ಮ’, ‘ನಡೆದಾಡುವ ಜ್ಞಾನ ಭಂಡಾರಆಗಿರುವ ೯೮ರ ಹರೆಯದ ಪ್ರೊಜಿ.ವೆಂಕಟಸುಬ್ಬಯ್ಯ ಅವರು ಬೆಂಗಳೂರಿನಲ್ಲಿ ನಡೆಯುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುನ್ನಡೆಸಲಿದ್ದಾರೆ.

ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ನಡೆದ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದಿಂದ ಜಿ.ವಿ. ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಪ್ರೊಚಿದಾನಂದಮೂರ್ತಿ, ಹಂ..ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್, ಎಂ.ಎಂ.ಕಲ್ಬುರ್ಗಿ, ಸಾ.ರಾ. ಅಬೂಬಕರ್ ಅವರ ಹೆಸರುಗಳು ಸಭೆಯಲ್ಲಿ ಚರ್ಚೆಗೆ ಬಂದಿದ್ದವು. ಆದರೆ ಸರ್ವಾನು ಮತದಿಂದ ಜಿವಿ ಅವರನ್ನು ಎಲ್ಲರೂ ಒಪ್ಪಿದ ಕಾರಣ ಅವರೇ ಸಮ್ಮೇಳನ ಅಧ್ಯಕ್ಷರೆಂದು ಘೋಷಿ ಸಲಾಯಿತು ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ತಿಳಿಸಿದರು.

ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಲೋಕ ಧೀಮಂತ ವ್ಯಕ್ತಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಪರಿಷತ್ತಿನ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಅವರ ಆಯ್ಕೆ ಅರ್ಥಪೂರ್ಣ ಎಂಬುದು ನಮ್ಮೆಲ್ಲರ ಭಾವನೆ ಎಂದು ಹೇಳಿದರು.

ಪೂರ್ವ ತಯಾರಿ: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ ೨೪ರಿಂದ ನಡೆಯುವ ಸಮ್ಮೇಳನಕ್ಕೆ ಪೂರ್ವ ತಯಾರಿ ನಡೆದಿದೆ. ಚಿತ್ರದುರ್ಗ ಸಮ್ಮೇಳನದಲ್ಲಾದ ಲೋಪ ದೋಷಗಳ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದಿದ್ದು, ಇಲ್ಲಿ ರೀತಿಯ ತಪ್ಪು ಮರು ಕಳಿಸದಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ನಲ್ಲೂರು ತಿಳಿಸಿದರು.

ಸಂಪನ್ಮೂಲಕ್ಕೆ ಕೊರತೆ ಇಲ್ಲ: ಸಮ್ಮೇಳನಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರ್.ಅಶೋಕ, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಸರ್ಕಾರ ಈಗಾಗಲೇ ರು. ಕೋಟಿ ಬಿಡುಗಡೆ ಮಾಡಿದೆ. ಮೇಯರ್ ಸಹ ರು. ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾ ರಿ ನೌಕರರ ಒಂದು ದಿನದ ಸಂಬಳ, ಶಾಸಕರ ಒಂದು ತಿಂಗಳ ವೇತನ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಗತ್ಯ ಹಣ ಸಂಗ್ರಹವಾಗಲಿದೆ ಎಂಬ ವಿಶ್ವಾಸವಿದೆ ಎಂದರು.

ಬ್ಯಾಗು, ಬ್ಯಾಡ್ಜ್ ಕಿತ್ತಾಟವಿಲ್ಲ: ಪ್ರತಿ ಸಮ್ಮೇಳನದಲ್ಲಿ ಬ್ಯಾಗು, ಬ್ಯಾಡ್ಜ್ಗೆ ಕಿತ್ತಾಟ ನಡೆಯುತ್ತದೆ. ಆದರೆ ಸಮ್ಮೇಳನದಲ್ಲಿ ಯಾವುದೇ ಬ್ಯಾಗನ್ನು ಪ್ರತಿನಿಧಿಗಳಿಗೆ ಕೊಡುವುದಿಲ್ಲ ಎಂದು ನಲ್ಲೂರು ಪ್ರಸಾದ್ ಸ್ಪಷ್ಟಪಡಿಸಿದರು. ಪ್ರತಿನಿಧಿ ಶುಲ್ಕ ರು. ೨೫೦ಕ್ಕೆ ನಿಗದಿಪಡಿಸಲಾಗಿದೆ ಎಂದು ಹೇಳಿದ ರಲ್ಲದೇ, ೫೦೦ ಪುಟಗಳಬೆಂಗಳೂರು ಬಾಗಿನಸ್ಮರಣ ಸಂಚಿಕೆ ಹೊರತರುತ್ತಿರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಸಾಪ ನಗರ ಜಿಲ್ಲಾಧ್ಯಕ್ಷ ರಾಮೇಗೌಡ ಮತ್ತಿತರರು ಇದ್ದರು.

ಜೀವಿ ೯೮ರ ವಯೋವೃದ್ಧ

ಸಮ್ಮೇಳನ ಡಿ. ೨೪, ೨೫ ಮತ್ತು ೨೬

ಸ್ಥಳ: ನ್ಯಾಷನಲ್ ಕಾಲೇಜು ಮೈದಾನ

ಮೂರು ಸಮಾನಾಂತರ ವೇದಿಕೆ

ಪ್ರತಿ ದಿನ ಸಂಜೆ ಸಾಂಸ್ಕೃತಿ ಕಾರ್ಯಕ್ರಮ

ಪ್ರತಿನಿಧಿಗಳು: ಅಂದಾಜು ೨೦,೦೦೦

ಬಾರಿ ಕಿಟ್ ಇಲ್ಲ, ಊಟ ಸರಳ

ಬೆಂಗಳೂರು ಬಗ್ಗೆ ವಿಶೇಷ ಗೋಷ್ಠಿ

೫೦೦ ಪುಟದ ಬೆಂಗಳೂರು ಬಾಗಿನ ಸ್ಮರಣ ಸಂಚಿಕೆ

ಸಮ್ಮೇಳನಕ್ಕೆಂದೇ ಆಕರ ಗ್ರಂಥಗಳ ಸಿದ್ಧತೆ

ವಾಮನಮೂರ್ತಿ ಕೋಟಿ ಪದಗಳ ಕೋಶ

ವೆಂಕಟಸುಬ್ಬಯ್ಯ ಅವರು ನೋಡಲುವಾಮನ ರೂಪವಾದರೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅತಿ ಎತ್ತರದ್ದು. ೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ವೆಂಕಟಸುಬ್ಬಯ್ಯ ಅವರ ಮೂಲ ಊರು ಶ್ರೀರಂಗಪಟ್ಟಣ. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ. ಪದವಿ ಪಡೆದು ಪ್ರಥಮ ಸ್ಥಾನಕ್ಕಾಗಿ ಸುವರ್ಣ ಪದಕವನ್ನೂ ಪಡೆದಿದ್ದರು. ನಂತರ ಬಿ.ಟಿ ಪದವಿ. ೧೯೩೯ ರಿಂದ ವೃತ್ತಿ ಆರಂಭಿಸಿ, ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಅನನ್ಯ ಸೇವೆ ಸಲ್ಲಿಸಿದರು.

ಮುಂದೆ ನಿವೃತ್ತಿಯ ನಂತರ ಬೋಧನಾ ಮಾರ್ಗಗಳ ವಿಶೇಷ ಪ್ರಾಧ್ಯಾಪಕರೆನಿಸಿಕೊಂಡರು. ಜೊತೆಯಲ್ಲೇ ಸಂಶೋಧನೆ, ಅನುವಾದ, ವಿಮರ್ಶೆ, ಗ್ರಂಥ ಸಂಪಾದನೆ, ನಿಘಂಟು ರಚನೆ ಇತ್ಯಾದಿ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸುವ ನಿರಂತರ ಕಾಯಕದಲ್ಲಿ ತೊಡಗಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಇವರಿಗೆ ಸಂದಿವೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹಲವು ಸಂಶೋಧನ ಮತ್ತು ವಿಮರ್ಶಾ ಲೇಖನಗಳಲ್ಲದೇ ಸುಮಾರು ೫೪ ಕೃತಿಗಳ ರಚನೆ ಅಥವಾ ಸಂಪಾದನೆ ಮಾಡಿದ್ದಾರೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಇವರ ಕನ್ನಡ ನಿಘಂಟು ಕನ್ನಡದಲ್ಲಿಯೇ ಪ್ರಥಮ, ವಿಶಿಷ್ಟ, ವಿನೂತನ.

ಕಸಾಪಗಿಂತ ಜೀವಿ ಹಿರಿಯರು!

ಬೆಂಗಳೂರು: ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಪ್ರೊಜಿ.ವೆಂಕಟಸುಬ್ಬಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ಗಿಂತ ಹಿರಿಯರು ಎಂಬ ಅಚ್ಚರಿಯ ಸಂಗತಿಯೊಂದಿದೆ. ಜಿವಿ ಹುಟ್ಟಿದ್ದು ೧೯೧೩ ಆಗಸ್ಟ್ ೨೩ರಂದು. ಕನ್ನಡ ಸಾಹಿತ್ಯ ಪರಿಷತ್ ಜನ್ಮತಾಳಿದ್ದು ೧೯೧೫ ಮೇ ೫ಕ್ಕೆ. ಕನ್ನಡ ಭಾಷೆಯಲ್ಲಿ ಗ್ರಂಥಗಳನ್ನು ರಚಿಸುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ಸ್ವತಂತ್ರ ಅಧಿಕಾರವುಳ್ಳ ಸಂಸ್ಥೆಯೊಂದರ ಅಗತ್ಯತೆಯನ್ನು ಅರಿತ ಮೈಸೂರು ಸಂಸ್ಥಾನ ಕಸಾಪವನ್ನು ಹುಟ್ಟಿಹಾಕಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ ಅನ್ನು ಉದ್ಘಾಟಿಸಿದ್ದರು. ಇದೀಗ ಸುಮಾರು .೨೦ ಲಕ್ಷ ಪ್ರತಿನಿಧಿಗಳನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕೋಟಿ ಕನ್ನಡಿಗರ ಪ್ರಾತಿ ನಿಧಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಹಾಗೆಯೇ ಪರಿಷತ್ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಸಮ್ಮೇಳನದ ೭೭ನೇ ಅಧ್ಯಕ್ಷರಾಗಿ ಜಿ.ವಿ. ಆಯ್ಕೆಯಾಗಿದ್ದಾರೆ.

ಕೃತಿಗಳು

ಇಗೋ ಕನ್ನಡ-

ಇಗೋ ಕನ್ನಡ-

ಮುದ್ದಣ ಪದ ಪ್ರಯೋಗ ಕೋಶ

ಎರವಲು ಪದ ಕೋಶ

ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು

ಕನ್ನಡ-ಕನ್ನಡ ಇಂಗ್ಲಿಷ್ ನಿಘಂಟು(ಇತರರೊಡನೆ)

ವ್ಯಕ್ತಿ ವಿಷಯ

ಕನ್ನಡವನ್ನು ಉಳಿಸಿ ಬೆಳೆಸಿದವರು

ಪ್ರೊ.ಟಿ.ಎಸ್. ವೆಂಕಣ್ಣನವರು

ಡಿ.ವಿ.ಗುಂಡಪ್ಪನವರು

ಕವಿ ಜನ್ನ

ಕನ್ನಡದ ನಾಯಕ ಮಣಿಗಳು

ವಿಮರ್ಶೆ, ಸಾಹಿತ್ಯ ಚರಿತ್ರೆ

ನಯಸೇನ

ಅನುಕಲ್ಪನೆ

ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ

ಸಂಪಾದನೆ

ಅಕ್ರೂರ ಚರಿತ್ರೆಯ ಸಂಗ್ರಹ

ಕರ್ಣ ಕರ್ಣಾಮೃತ

ನಾಗರಸನ ಭಗವದ್ಗೀತೆ

ಮುದ್ದಣ ಭಂಡಾರ ಭಾಗ-

ಮುದ್ದಣ ಭಂಡಾರ ಭಾಗ-

ತಮಿಳು ಕಥೆಗಳು(ಇತರರೊಡನೆ)

ಪ್ರೊ. ಜಿ. ವೆಂಕಟಸುಬ್ಬಯ್ಯ ರವರ ಚಿಕ್ಕ ಪರಿಚಯ :

ಶಿಕ್ಷಣ, ಸಾಹಿತ್ಯ, ವಿಮರ್ಶೆ, ಭಾಷಾ ಸಂಶೋಧನೆ, ಸಮಾಜಸೇವೆ-ಹೀಗೆ ಐದೂ ಪ್ರಕಾರಗಳಲ್ಲಿ ಯಶಸ್ವಿಯಾಗಿ ಮಿಂಚಿ ಕನ್ನಡ ಭಾಷಾಸಂಪತ್ತನ್ನು ವಿಫುಲಗೊಳಿಸಿದ ವಿಶಿಷ್ಟ ವ್ಯಕ್ತಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು. ಆತ್ಮೀಯರಿಗೆ ಇವರು ಪ್ರೊ.ಜಿ.ವಿ. “ನಡೆದಾಡುವ ನಿಘಂಟು” ಎಂದೇ ಕನ್ನಡನಾಡಿನಲ್ಲಿ ಮನೆ ಮಾತಾಗಿರುವ ಪ್ರೊ. ಜಿ.ವಿ. ಈ ಶತಮಾನ ಕಂಡ ಅಪರೂಪದ ಭಾಷಾತಜ್ಞ.

ಕನ್ನಡ ಸ್ನಾತಕೋತ್ತರ ಶಿಕ್ಷಣದಲ್ಲಿ ಸುವರ್ಣಪದಕ ವಿಜೇತರಾದ ಪ್ರೊ. ಜಿವಿ ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಅಹರ್ನಿಶಿ ದುಡಿದು ಅನೇಕಾನೇಕ ಜ್ಞಾನಾರ್ಥಿಗಳಿಗೆ ದೀವಿಗೆಯಾದವರು. ಜೊತೆಯಲ್ಲಿಯೇ ವಿಮರ್ಶೆ, ಭಾಷಾ ಸಂಶೋಧನೆ, ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡವರು. ಇವರ ನಿರಂತರ ಭಾಷಾ ಸಂಶೋಧನೆಯ ಫಲವಾಗಿ ಕನ್ನಡಿಗರಿಗೆ ದೊರಕಿದ ಅಮೂಲ್ಯ ಆಸ್ತಿ ಹಲವಾರು ನಿಘಂಟುಗಳು. ಅಖಿಲ ಭಾರತ ನಿಘಂಟುಕಾರರ ಸಂಘಕ್ಕೆ ಅನೇಕ ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದ ಪ್ರೊ. ಜಿವಿ ಇಪ್ಪತ್ತು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹನ್ನಿಘಂಟಿನ ಪ್ರಧಾನ ಸಂಪಾದಕರಾಗಿ ಆರು ಸಂಪುಟಗಳನ್ನು ಪ್ರಕಟಪಡಿಸಿದರು; ಕೊನೆಯ ನಿಘಂಟಿನ ಬಹುಭಾಗವನ್ನು ಸಿದ್ಧಪಡಿಸಿದರು. ನಂತರದಲ್ಲಿಯೂ ಪ್ರೊ. ಜಿವಿಯವರ ಸಂಪಾದಕತ್ವದಲ್ಲಿ ಅನೇಕ ನಿಘಂಟುಗಳು ಹೊರಬಂದಿವೆ. ಮೂರು ಭಾಷೆಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ಇವರ “ಇಗೋ ಕನ್ನಡ” ಎಂಬ ಪ್ರಜಾವಾಣಿಯ ಅಂಕಣ ಕನ್ನಡಿಗರು “ಭಾಷೆಯ ಸೊಗಡನ್ನು” ಸವಿಯುವಂತೆ ಮಾಡಿದೆ. ಪ್ರೊ. ಜಿವಿಯವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶಂಭಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮತ್ತು ನಾಡೋಜ ಪಂಪ ಪ್ರಶಸ್ತಿಗಳಿಂದ ಪುರಸ್ಕೃತರು.

“ಭಾಷೆ ನಿರಂತರವಾಗಿ ಬೆಳೆಯುವಂತಹುದು. ಇದಕ್ಕೆ ಯಾವುದೇ ಚೌಕಟ್ಟಿನ ಅವಶ್ಯಕತೆಯಿಲ್ಲ. ಅನ್ಯ ದೇಶ್ಯ ಶಬ್ದಗಳು ಕನ್ನಡ ಭಾಷೆಯಲ್ಲಿ ಭಾಷೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತವೆ”, ಎನ್ನುವ ಪ್ರೊ. ಜಿವಿ ಓರ್ವ ಉದಾರ ಹಾಗೂ ವಿಚಾರವಾದಿಯಾದ ಭಾಷಾ ವಿಜ್ಞಾನಿ.

ಕಿರಿಯ ವಯಸ್ಸಿನವರಿಗೂ ಆತ್ಮೀಯರಾದ ಇವರು ಬಡ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿರುವ “ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್” ಸಂಸ್ಥೆಯ ಅಧ್ಯಕ್ಷರಾಗಿ,ವಿಜಯ ಸಂಜೆ ಕಾಲೆಜಿನ ಪ್ರಾಚಾರ್ಯರಾಗಿ ಅನೇಕ ವರ್ಷಗಳ ಸೇವೆ ಸಲ್ಲಿಸಿದ್ದಾರೆ 97 ವಯಸ್ಸಿನ ಪ್ರೊ. ಜಿವಿಯವರ ಅತ್ಯಂತ ಶಿಸ್ತಿನ, ವ್ಯವಸ್ಥಿತ ಹಾಗೂ ಯಶಸ್ವಿಯಾದ ಬದುಕಿನ ರಹಸ್ಯ ಬಹುಶಃ ಇವರ ನಿರಂತರ ಭಾಷಾ ಸಂಶೋಧನೆಯೇ ಇರಬಹುದೆ?

77ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಜಿ.ವಿ


ಬೆಂಗಳೂರು, ನ.10: ನಗರದಲ್ಲಿ ಡಿ.24ರಿಂದ ಮೂರು ದಿನಗಳ ಕಾಲ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಘಂಟು ಪಿತಾಮಹ, 97ವರ್ಷದ ಜ್ಞಾನವೃದ್ಧ, ಸಾಹಿತಿ, .ಜಿ.ವೆಂಕಟಸುಬ್ಬಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರ ನೇತೃತ್ವದ ಇಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಪ್ರೊ.ಜಿ.ವಿ ಅವರನ್ನು ಆರಿಸಲಾಯಿತು.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ.24, 25 ಮತ್ತು 26ರಂದು 77ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕಾಗಿ ಹಂಪ ನಾಗರಾಜಯ್ಯ,ಚಿಮೂ, ಸಿಪಿಕೆ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿತ್ತು.

ಪ್ರೊ. ಜಿವಿ ಅವರು ನಾಡು ಕಂಡಿರುವ ಅತ್ಯುತ್ತಮ ಸಾಹಿತಿ. ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಇಷ್ಟು ವರ್ಷ ಅವರ ಯಾಕೆ ಆಗಿಲ್ಲ, ಅವರ ಆಯ್ಕೆ ವಿಳಂಬವಾಗಿದೆ ಎಂಬ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ. ನಾನು ಕಸಾಪಗೆ ಬಂದು ಎರಡು ವರ್ಷ ಆಯ್ತು. ಈ ಹಿಂದೆ ಅವರು ಯಾಕೆ ಅಧ್ಯಕ್ಷರಾಗಲಿಲ್ಲ ಎನ್ನುವುದಕ್ಕಿಂತ ಈಗ ಆಗಿರುವುದಕ್ಕೆ ಸಂತೋಷಪಡೋಣ ಎಂದು ಕಸಾಪ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಹೇಳಿದ್ದಾರೆ.

ಪ್ರೊ.ಜಿ.ವಿ ಕಿರು ಪರಿಚಯ: ಕನ್ನಡ ನಾಡು ಕಂಡ ಅತ್ಯುತ್ತಮ ಭಾಷಾ ತಜ್ಞ ಪ್ರೊ.ವೆಂಕಟಸುಬ್ಬಯ್ಯನವರು 1913ರಲ್ಲಿ ಮೈಸೂರಿನಲ್ಲಿ ಜನಿಸಿದರು. ಮಹಾರಾಜ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ ಪದವಿ ಗಳಿಸಿದ ಕೀರ್ತಿ ಹೊಂದಿದ್ದಾರೆ. ನಂತರ ಉಪನ್ಯಾಸಕ ವೃತ್ತಿ ಆರಂಭಿಸಿದ ಅವರು ಸುಮಾರು ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದರು.

ಸುಮಾರು 25ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಪಾದಿಸಿರುವ ಪ್ರೊ.ಜಿವಿ ಅವರು ನಿಘಂಟು ತಜ್ಞರಾಗಿ ಎಲ್ಲರಿಗೂ ಪರಿಚಿತ. ಪ್ರಜಾವಾಣಿ ದಿನಪತ್ರಿಕೆಯ 'ಇಗೋ ಕನ್ನಡ' ಅಂಕಣ ಸಮಸ್ತ ಕನ್ನಡಿಗರ ಮನದಾಳದಲ್ಲಿದೆ. ವೆಂಕಟಸುಬ್ಬಯ್ಯ ಅವರು ಇಪ್ಪತ್ತು ವರ್ಷಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಹತ್ತು ಸಂಪುಟಗಳನ್ನು ಹೊರತಂದಿದ್ದರು.

ಪ್ರೊ.ವೆಂಕಟಸುಬ್ಬಯ್ಯನವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ,ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಶಂಭಾ ಪ್ರಶಸ್ತಿ, ಸೇಡಿಯಾಪು, ಶಿವರಾಮ ಕಾರಂತ , ಮಾಸ್ತಿ ಹಾಗೂ ಪಂಪ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇತ್ತೀಚೆಗೆ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಟ್ರಸ್ಟ್ ನಿರ್ಮಾಣದ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದ 'ಸ್ತ್ಯುತ್ಯಂತರ' ಎಂಬ ಹೆಸರಿನ ಕಿರುಚಿತ್ರವನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದರಲ್ಲಿ ಪ್ರೊ.ಜಿ.ವಿ ಅವರ ಜೀವನಗಾಥೆಯ ಪರಿಚಯ ಸಿಗುತ್ತದೆ
ಕೃಪೆ:thatskannada

ಬುಧವಾರ, ನವೆಂಬರ್ 3, 2010

ಬೆಂಗಳೂರು ಸಾಹಿತ್ಯಸಮ್ಮೇಳನಕ್ಕೆ ಲಾಂಛನ

ಕೃಪೆ:ಉದಯವಾಣಿ-2-11-2010
ಬೆಂಗಳೂರು: ನಾಲ್ಕು ದಶಕಗಳ ನಂತರ ರಾಜಧಾನಿಯಲ್ಲಿ ಕನ್ನಡ ಡಿಂಡಿಮ ಮೊಳಗಿಸಲಿರುವ 77ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೈಶಿಷ್ಟ್ಯವನ್ನು ಬಿಂಬಿಸುವ 'ಲಾಂಛನ' ಮಂಗಳವಾರ ಇಲ್ಲಿ ಬಿಡುಗಡೆಗೊಂಡಿತು.ಕಲಾವಿದ ಬಾಗೂರು ಮಾರ್ಕಂಡೇಯ ಸಿದ್ಧಪಡಿಸಿದ ಲಾಂಛನವನ್ನು ಗೃಹ ಸಚಿವ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಆರ್‌. ಅಶೋಕ್‌, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆ ಮಾಡಿದರು.ಸಮ್ಮೇಳನವನ್ನು ಡಿಸೆಂಬರ್‌ 24,25,26 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ನಲ್ಲೂರು ಪ್ರಸಾದ್‌ ಇದೇ ಸಂದರ್ಭದಲ್ಲಿ ಘೋಷಿಸಿದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಯಲಿದ್ದು, ನ.10ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರು ಯಾರೆಂದು ತೀರ್ಮಾನಿಸಲಾಗುತ್ತದೆ ಎಂದು ನಲ್ಲೂರು ಹೇಳಿದರು.ಕಳೆದ ಬಾರಿ ವಿವಾದಕ್ಕೆ ಕಾರಣವಾಗಿದ್ದ ಸಮ್ಮೇಳನ ಅಧ್ಯಕ್ಷರಿಗೆ ನೀಡಲಾಗಿದ್ದ 11 ಲಕ್ಷ ರೂ. ನಗದು ಕಪ್ಪದ ಪದ್ಧತಿ ಈ ವರ್ಷ ಇರುವುದಿಲ್ಲ. ಸಮ್ಮೇಳನದ ಅಧ್ಯಕ್ಷರಿಗೆ ಬೆಲೆ ಕಟ್ಟುವ ಬದಲು, ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆ ಮೌಲ್ಯವನ್ನು ಕಟ್ಟುತ್ತೇವೆ. ಹಾಗಾಗಿ ಈ ಬಾರಿ ಯಾವುದೇ ರೀತಿಯಲ್ಲಿ ಗೌರವ ಧನ ಸಮರ್ಪಣೆ ಪದ್ಧತಿ ಇರುವುದಿಲ್ಲ ಎಂದರು.ಸಮ್ಮೇಳನದಲ್ಲಿ ಭರ್ಜರಿ ಭೂರಿ ಭೋಜನ ಇರುವುದಿಲ್ಲ. ಸಮ್ಮೇಳನಕ್ಕೆ ಬಂದವರಿಗೆಲ್ಲರಿಗೂ ಹೊಟ್ಟೆ ತುಂಬಾ ಊಟದ ವ್ಯವಸ್ಥೆ ಮಾಡಲಾಗುವುದು. ಸಮ್ಮೇಳನವೆಂಬುದು ಫ್ಯಾಷನ್‌ ಷೋ ಆಗಬಾರದು. ಅದು ಸಾಹಿತ್ಯ, ಸಂಸ್ಕೃತಿಯನ್ನು ಉಣಬಡಿಸುವ ಅಕ್ಷರ ಜಾತ್ರೆಯಾಗಬೇಕೆಂಬುದು ತಮ್ಮ ನಿಲುವು ಎಂದು ನಲ್ಲೂರು ಹೇಳಿದರು.ಲಾಂಛನ ಬಿಡುಗಡೆ ಮಾಡಿದ ಸಚಿವ ಆರ್‌. ಅಶೋಕ್‌, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ಕೊಡುಗೆಯಾಗಿ ನೀಡಲಿದ್ದಾರೆ. ನಗರ ಜಿಲ್ಲಾ ವ್ಯಾಪ್ತಿಯ ಶಾಸಕರು, ಸಚಿವರು ಕೂಡ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಲಿದ್ದಾರೆಂದರು.ಬೆಂಗಳೂರಿನಲ್ಲಿ ಕನ್ನಡ ಮಾಯವಾಗುತ್ತಿದೆ. ಕನ್ನಡವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಮ್ಮೇಳನ ನಡೆಸಲು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಚಿಂತನೆ ನಡೆಸಿವೆ. ಬೆಂಗಳೂರಿನಲ್ಲಿರುವ ಕನ್ನಡ ಬಾರದವರಿಗೆ ಕನ್ನಡವನ್ನು ಕಲಿಸುವ ಕೆಲಸಕ್ಕೆ ಸಮ್ಮೇಳನ ನಾಂದಿ ಹಾಡಬೇಕು ಎಂದು ಹೇಳಿದರು.ಉದ್ಯೋಗವನ್ನು ಹುಡುಕಿಕೊಂಡು ಸಾಕಷ್ಟು ಮಂದಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರೆಲ್ಲರಿಗೂ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು. ಸಮ್ಮೇಳನದ ಮೂಲಕ ಬೆಂಗಳೂರಿನಲ್ಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿ ಮತ್ತಷ್ಟು ಪ್ರವರ್ಧಮಾನಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಬೆಂಗಳೂರಿನ ನಾಗರಿಕರು, ಸಾಹಿತ್ಯ ಪ್ರೇಮಿಗಳು, ಅಧಿಕಾರಿಗಳು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಜತೆ ಸಹಕರಿಸಬೇಕೆಂದು ಕೋರಿದರು.ಸಮ್ಮೇಳನದ ಸ್ವಾಗತ ಸಮಿತಿ ಸಂಚಾಲಕ ಅಶ್ವತ್ಥನಾರಾಯಣ, ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮೇಗೌಡ ಪಾಲ್ಗೊಂಡಿದ್ದರು