ಬುಧವಾರ, ನವೆಂಬರ್ 24, 2010

ಸಾಹಿತ್ಯ ಸಮ್ಮೇಳನ: ‘ನಮ್ಮತನ’ವೇ ಈ ಬಾರಿಯ ವಿಶೇಷ

ಬೆಂಗಳೂರು: ನಾಲ್ಕು ದಶಕದ ನಂತರ ರಾಜಧಾನಿಯಲ್ಲಿ ನಡೆಯುತ್ತಿರುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಿಷಯಾಧಾರಿತವಾಗಿ ನಡೆಸುವ ಪ್ರಯತ್ನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಸಕ್ತಿ ವಹಿಸಿದೆ.
ಸಮ್ಮೇಳನದ ಗೋಷ್ಠಿಗಳು ಕಳೆದು ಹೋಗುತ್ತಿರುವ ನಮ್ಮ ತನದ ಬಗ್ಗೆ ತಿಳಿ ಹೇಳುವ ದಪ್ಪ ದನಿಯಾಗಬೇಕೆಂಬ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗುತ್ತಿದೆ ಎನ್ನುತ್ತಾರೆ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್.
ಕೃಷಿ ವ್ಯವಸ್ಥೆ ಅಸಮತೋಲನವಾಗಿದೆ, ಗ್ರಾಮೀಣ ಬದುಕು ತಲ್ಲಣವಾಗಿದೆ, ನಗರ ಆಕರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೇಸಾಯ ಸಂಸ್ಕೃತಿ ಕರಗುತ್ತಿದೆ, ಬೇಸಾಯಗಾರರ ಬದುಕು ಬೆಂದು ಹೋಗುತ್ತಿದೆ. ವಿದ್ಯಾವಂತರಲ್ಲದವರೂ ನಗರವಾಸಿಗಳಾಗುತ್ತಿದ್ದಾರೆ. ಹೀಗಾದರೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲಿ ಕಳೆದುಕೊಳ್ಳುತ್ತೇವೆ. ಈ ದೃಷ್ಟಿಯಿಂದ ನೆಲದ ಬಗ್ಗೆ ಆಪ್ತತೆ ಮೂಡಿಸುವ ಉದ್ದೇಶದಿಂದ ದೇಸಿ ಸಂಸ್ಕೃತಿ ಮತ್ತು ತಲ್ಲಣ ಕುರಿತು ವಿಶೇಷ ಗೋ ಷ್ಠಿ ನಡೆಯಲಿದೆ ಎಂದು ನಲ್ಲೂರು ವಿವರಿಸುತ್ತಾರೆ.
ಹಾಗೆಯೇ ಪರಂಪರಾಗತ ಕೃಷಿ ಅಪಾಯದ ಅಂಚಿನಲ್ಲಿದೆ. ರಾಸಾಯನಿಕದ ಹಾವಳಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಪರಂಪರಾಗತ ಅಥವಾ ಸಾವಯವ ಕೃಷಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಗೋಷ್ಠಿ ನಡೆಯಲಿದೆ.
ಮತ್ತೊಂದು ಮುಖ್ಯ ಅಂಶವೆಂದರೆ ಮಾನವ ಹಕ್ಕುಗಳು, ಮಾಹಿತಿ ಹಕ್ಕು, ಮಹಿಳಾ ಹಕ್ಕುಗಳ ಬಗ್ಗೆಯೇ ಗೋಷ್ಠಿಯೊಂದು ನಡೆದು ಈ ಬಗ್ಗೆ ಜಾಗೃತಿ ಮೂಡಿಸಲಿದೆ.
ಉಳಿದಂತೆ ಕಾನೂನು ಮತ್ತು ಕನ್ನಡ, ರಂಗಭೂಮಿಯ ಸಂಕಷ್ಟಗಳ ಬಗ್ಗೆಯೂ ಚರ್ಚೆ ನಡೆಯಲಿ ದೆ. ಒಟ್ಟಾರೆಯಾಗಿ ಆಧುನಿಕತೆಯ ಅವಾಂತರದಿಂದ ಕಳೆದುಕೊಳ್ಳುತ್ತಿರುವ ನಮ್ಮತನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಗೋಷ್ಠಿಯ ಉದ್ದೇಶವಾಗಿರಬೇಕೆಂಬ ಕಲ್ಪನೆ ಇದೆ ಎಂದು ನಲ್ಲೂರು ತಿಳಿಸುತ್ತಾರೆ.
ಬೆಂಗಳೂರಿಗಾಗಿ ಒಂದು ಗೋಷ್ಠಿ: ಭವಿಷ್ಯದ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ದೂರದೃಷ್ಟಿ ನೀಡುವಂತಹ ಮತ್ತು ಸೂಕ್ತ ಮುಂಜಾಗ್ರತೆ ವಹಿಸುವ ಸಲಹೆಗಳನ್ನು ನೀಡುವ ಉದ್ದೇಶದಿಂದ ವಿಶೇಷ ಗೋಷ್ಠಿ ನಡೆಯುತ್ತಿದೆ.
ಐತಿಹಾಸಿಕ ಬೆಂಗಳೂರು, ವರ್ತಮಾನದ ಬೆಂಗಳೂರು ಮತ್ತು ನಾಳಿನ ಬೆಂಗಳೂರು ಕುರಿತು ನಡೆಯುವ ಗೋಷ್ಠಿ ವಿಶೇಷ ಗಮನ ಸೆಳೆಯಲಿದೆ ಎಂದೇ ಅಂದಾಜಿಸಲಾಗಿದೆ.
ಬೆಂಗಳೂರಿನ ಸ್ವರೂಪ ಬದಲಾಗಿದ್ದು, ಐಟಿ, ಬಿಟಿ ಬೆಳೆದು ಬಂದಿದ್ದು, ಬಹುಮಹಡಿ ಕಟ್ಟಡಗಳು ನೆಲೆ ನಿಂತಿದ್ದು, ಸಂಚಾರ ಸಮಸ್ಯೆಗಳು ಗೋಷ್ಠಿಯಲ್ಲಿ ಬೆಳಕು ಚೆಲ್ಲಲಿವೆ. ಜೊತೆಗೆ ಮುಂದೆ ‘ಅದ್ಭುತ ಬೆಂಗಳೂರು’ ಹೇಗಿರಬೇಕೆಂದು ಕನ್ನಡ ಸಾಹಿತ್ಯ ಸಮ್ಮೇಳನ ಕನಸು ಕಟ್ಟಲಿದೆ. ಇದರ ಲ್ಲಿ ಅಧಿಕಾರಿಗಳನ್ನು ತೊಡಗಿಸಿಕೊಳ್ಳಬೇಕೆಂಬ ಉದ್ದೇಶವಿದೆ.
ಕೃಪೆ:ಗ.ಕ