ಬುಧವಾರ, ನವೆಂಬರ್ 24, 2010

77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಂದು ಕೋಟಿ, ರನ್ನ ಪ್ರತಿಷ್ಠಾನಕ್ಕೆ 12 ಲಕ್ಷ ರೂ ಅನುದಾನ

ಬೆಂಗಳೂರು: ಮುಂದಿನ ತಿಂಗಳ 24 ರಿಂದ ನಗರದಲ್ಲಿ ಮೂರು ದಿನಗಳ ಕಾಲ ನಡೆಯುವ 77ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರ ಜೋಳ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರಿಗೆ ಒಂದು ಕೋಟಿ ರೂಪಾಯಿ ಚೆಕ್ ನೀಡಿದರು.
41 ವರ್ಷಗಳ ನಂತರ ನಗರದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ 80 ಸಾವಿರ ಜನ ಭಾಗವಹಿ ಸುವ ನಿರೀಕ್ಷೆ ಇದೆ. ಇದಲ್ಲದೆ ಸುಮಾರು 20 ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಅವರಿ ಗೆಲ್ಲ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಕಾರಜೋಳ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಸಮ್ಮೇಳನ ನಡೆಯಲಿದ್ದು, ಪ್ರತಿನಿಧಿಗಳಿಗೆ 250 ರೂಪಾ ಯಿ ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ.ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿ ಗಳಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಕನ್ನಡ ಭವನದ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಮತ್ತು ಬಿಬಿಎಂಪಿ ಮಾಡಲಿದೆ ಎಂದರು.
ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ನುಡಿ ತೇರು’ ಉತ್ಸವ ನಡೆಯಲಿದ್ದು, ನಗರದ ಎಲ್ಲ ಬಡಾವಣೆಗಳಲ್ಲಿ ಸಮ್ಮೇಳನದ ಕಂಪನ್ನು ಬಿಂಬಿಸುವ ವಾತಾವರಣ ನಿರ್ಮಾಣ ಮಾಡುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ರನ್ನ ಪ್ರತಿಷ್ಠಾನಕ್ಕೆ 12 ಲಕ್ಷ
ಕನ್ನಡದ ರತ್ನತ್ರಯರಲ್ಲಿ ಒಬ್ಬರಾದ ‘ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ’ವನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರತಿ ವರ್ಷ 12 ಲಕ್ಷ ರೂಪಾಯಿ ಅನುದಾನವನ್ನು ಪ್ರತಿಷ್ಠಾನಕ್ಕೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಮಂಗಳ ವಾರ ಇಲ್ಲಿ ತಿಳಿಸಿದರು.
ಬಾಗಲಕೋಟೆ ಜಿಲ್ಲಾಧಿಕಾರಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ‘ಪ್ರಜಾವಾಣಿ’ಯ ಸಹ ಸಂಪಾದಕ ಪದ್ಮರಾಜ ದಂಡಾವತಿ, ಮುಧೋಳದ ಎಚ್.ವೈ.ಕಾತರಕಿ, ಲೋಕಾಪುರದ ಎಸ್.ಬಿ. ಕೃಷ್ಣೇ ಗೌಡ, ಪ್ರಾಧ್ಯಾಪಕ ಶಂಭು ಬಳಿಗಾರ ಪ್ರತಿಷ್ಠಾನದ ಅಧಿಕಾರೇತರ ಸದಸ್ಯರಾಗಿದ್ದಾರೆ.
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಾರ್ಯನಿರ್ವಾಹಕ ಎಂಜಿನಿಯರ್ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಾಹಿತ್ಯ ಚಟುವಟಿಕೆಗಳಿಗಾಗಿ ಅನುದಾನ ನೀಡಲಾಗುತ್ತದೆ. ರನ್ನನ ಜನ್ಮಸ್ಥಳ ಮುಧೋಳದಲ್ಲಿರುವ ಸ್ಮಾರಕ ಭವನದ ಉಸ್ತುವಾರಿ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಪ್ರತಿಷ್ಠಾನಕ್ಕೆ ನೀಡ ಲಾಗುವುದು ಎಂದರು.
ಕೃಪೆ:ಗ.ಕ