ಮಂಗಳವಾರ, ಸೆಪ್ಟೆಂಬರ್ 28, 2010

ಬೆ೦ಗಳೂರು : 77ನೇ ಅಖಿಲ ಭಾರತ ಸಾಹಿತ್ಯ ಜಾತ್ರೆಯ ಅಧ್ಯಕ್ಷ ಗಾದಿಗೆ ಯಾರು?

ಪ್ರಕಟಿಸಿದ ದಿನಾಂಕ : 2010-09-05

ಬೆಂಗಳೂರು: ಡಿಸೆಂಬರ್‌ನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟಕ್ಕಾಗಿ ಸಾಹಿತಿಗಳ ತಾಲೀಮು ಶುರುವಾಗಿದೆ.
ಈ ಹಿಂದಿನ ಹಲವು ಸಾಹಿತ್ಯ ಸಮ್ಮೇಳನಗಳ ಸಮ್ಮೇಳನಾಧ್ಯಕ್ಷರ ಅಂತಿಮ ಹಂತದ ಆಯ್ಕೆ ಪಟ್ಟಿಯ ಲ್ಲಿ ಹೆಸರಿದ್ದು, ಇದುವರೆಗೂ ಈ ಅವಕಾಶದಿಂದ ವಂಚಿತರಾಗಿರುವ ಕನ್ನಡ ನಿಘಂಟು ಖ್ಯಾತಿಯ ಹಿರಿಯ ಸಾಹಿತಿ ೯೬ರ ಹರೆಯದ ಪ್ರೊ| ವೆಂಕಟಸುಬ್ಬಯ್ಯ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಇವರೊಂದಿಗೆ ಹಿರಿಯ ಸಂಶೋಧಕ ಪ್ರೊ| ಚಿದಾನಂದ ಮೂರ್ತಿ ಅವರ ಹೆಸರೂ ಇದೆ. ಆದರೆ, ಮತ್ತೆ ಕೆಲವು ಸಾಹಿತಿಗಳು ತಾವೇ ಅಧ್ಯಕ್ಷರಾಗಬೇಕೆಂದು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಆದರೆ, ತಾವು ಯಾವುದೇ ಲಾಬಿಗೆ ಬಗ್ಗುವುದಿಲ್ಲ. ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿಯೇ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಳುತ್ತಾರೆ.
ಈ ನಡುವೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳು- ೧. ಪ್ರೊ| ಜಿ. ವೆಂಕಟಸುಬ್ಬಯ್ಯ; ೨. ಪ್ರೊ| ಚಿದಾನಂದಮೂರ್ತಿ; ೩. ಹಂಪ ನಾಗರಾಜಯ್ಯ; ೪. ಸಿ.ಪಿ. ಕೃಷ್ಣಕುಮಾರ್; ೫. ಎಂ.ಎಂ. ಕಲ್ಬುರ್ಗಿ
ಒತ್ತಡ ತಂತ್ರ: ಕೆಲವು ಧೀಮಂತರೆನಿಸಿಕೊಂಡ ಸಾಹಿತಗಳೇ ಕೆಲವರ ಪರವಾಗಿ ಒತ್ತಡ ತರುತ್ತಾರೆ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರ ಅಭಿಮತ. ಕಳೆದ ಬಾರಿಯೂ ಇದೇ ರೀತಿ ನಡೆದಿತ್ತು. ಆದರೆ ಕಸಾಪ ಅದಕ್ಕೆ ಕೇರ್ ಮಾಡಲ್ಲ ಎಂದು ತಿಳಿಸಿದರು. ಒಟ್ಟಿನಲ್ಲಿ ನವೆಂಬರ್‌ನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿ ಆರಂಭವಾಗಿರು ವಂತೆಯೇ ಕೆಲವು ಸೋಕಾಲ್ಡ್ ಸಾಹಿತಿಗಳು ಸಮ್ಮೇಳನಾಧ್ಯಕ್ಷರಾಗಲು ತಯಾರಿ ಆರಂಭಿಸಿದ್ದಾರೆ.
ಸಮ್ಮೇಳನಕ್ಕೆ ಸಿದ್ಧತೆ: ‘ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಸೌಲಭ್ಯವೂ ಇದೆ, ಹಾಗೆಯೇ ಸಮಸ್ಯೆಯೂ ಇದೆ’ ಎನ್ನುತ್ತಾರೆ ಸಾಹಿತ್ಯ ಪರಿಷತ್ತಿನ ದಂಡನಾಯಕ ನಲ್ಲೂರು ಪ್ರಸಾದ್. ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಸವಾಲಿನ ತೀರ್ಮಾನ ಕೈಗೊಂಡಿದ್ದೇವೆ.
ಇದಕ್ಕಾಗಿ ಎಲ್ಲಾ ಹಂತದ ತಯಾರಿ ಆರಂಭವಾಗಿದೆ. ಸರ್ಕಾರ ಉತ್ತಮ ಸಹಕಾರ ಕೊಡುತ್ತಿದ್ದು, ಉತ್ತಮ ರೀತಿಯಲ್ಲಿ, ಲೋಪಗಳನ್ನು ಕಡಿಮೆ ಮಾಡಿ ಯಶಸ್ವಿಯಾಗಿ ಸಮ್ಮೇಳನ ನಡೆಸಲು ಉದ್ದೇಶಿ ಸಲಾಗಿದೆ ಎಂದರು. ಇಂಗ್ಲಿಷ್ ಹಾಗೂ ಅನ್ಯ ಭಾಷೆಯ ಪ್ರಭಾವ ಹೆಚ್ಚಿರುವ ಬೆಂಗಳೂರಿನಲ್ಲಿ ಸಮ್ಮೇಳನ ನಡೆಸುವುದು ಸವಾಲೇ ಸರಿ. ಈ ಸವಾಲನ್ನು ಸಾಧ್ಯ ಮಾಡುವುದು ಸಾಹಿತ್ಯ ಪರಿಷತ್ತಿನ ಗುಣ ಎಂದು ಹೆಮ್ಮೆಯಿಂದ ಅವರು ಹೇಳಿಕೊಳ್ಳುತ್ತಾರೆ.
ಸಮ್ಮೇಳನ ಮುಖ್ಯಾಂಶಗಳು
- ೪೦ ವರ್ಷದ ನಂತರ ಬೆಂಗಳೂರಲ್ಲಿ ಸಾಹಿತ್ಯ ಜಾತ್ರೆ
- ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ನಡೆಸಲು ತೀರ್ಮಾನ; ಪೂರ್ವ ಭಾವಿ ಸಭೆಗಳು ಆರಂಭ
- ಶೀಘ್ರವೇ ಕನ್ನಡಿಗ ಐಟಿಬಿಟಿ ತಜ್ಞರೊಂದಿಗೆ ಸಭೆ
- ಜನಪದಕ್ಕೆ ಒತ್ತುಕೊಡುವ ಕೃತಿಗಳಿಗೆ ಈ ಬಾರಿ ಪ್ರಾಧಾನ್ಯತೆ
- ಸಮ್ಮೇಳನದಲ್ಲಿ ಒಟ್ಟು ೭೭ ಕೃತಿ ಬಿಡುಗಡೆ; ಗಾಯನ ಸಮಾಜ, ಕುವೆಂಪು ಕಲಾಕ್ಷೇತ್ರ, ಜೈನ್ ಸಮುದಾಯ ಭವನ ಸಮಾನಾಂತರ ವೇದಿಕೆ
- ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಎಂಬುದೊಂದೇ ಮುಖ್ಯ ನಿರ್ಣಯ ಸಾಧ್ಯತೆ