ಗುರುವಾರ, ಫೆಬ್ರವರಿ 3, 2011

ಸಮ್ಮೇಳನ ಮೆರವಣಿಗೆ ಹೊಂಟಿದೆ ಜೊತೆಗೆ ಬನ್ನಿ

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ಸಜ್ಜಾಗಿದೆ. ನಾಳೆ ಬೆಳಗ್ಗೆ ಮೆರವಣಿಗೆ ಆರಂಭಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.

ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಜಿ.ವೆಂಕಟಸುಬ್ಬಯ್ಯನವರನ್ನು ಬಿಬಿಎಂಪಿ ಕಚೇರಿಯ ಮುಂದಿರುವ ನಾಡಪ್ರಭು ಕೆಂಪೇಗೌಡ ಪುತ್ಥಳಿಯ ಬಳಿಯಿಂದ ಸಮ್ಮೇಳನ ವೇದಿಕೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು. ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನುಡಿಜಾತ್ರೆಯ ಮೆರವಣಿಗೆಗೆ ಚಾಲನೆ ದೊರಕಲಿದೆ ಎಂದು ಮೆರವಣಿಗೆಯ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಅವರು ತಿಳಿಸಿದರು. 

ಮೆರವಣಿಗೆಯಲ್ಲಿ ಪೊಲೀಸ್ ವಾದ್ಯಗೋಷ್ಠಿ, ಅಶ್ವದಳ, ಸಾಲಂಕೃತ ಆನೆಗಳು, ಒಂಟೆಗಳು ಮತ್ತು ನಾಡಿನ ವೈವಿಧ್ಯದ ಮೆರಗನ್ನು ತೋರಿಸುವ 15 ಸ್ತಬ್ಧ ಚಿತ್ರಗಳು ಪಾಲ್ಗೊಳ್ಳುತ್ತಿರುವುದು ಈ ಬಾರಿಯ ವಿಶೇಷವಾಗಿದೆ. ದಸರೆಯ ನೆನಪನ್ನು ಮರುಕಳಿಸುವಂತೆ ಮೆರವಣಿಗೆ ನಡೆಸಬೇಕೆಂಬುದು ಕರವೇ ಕನಸು ಕಾಣುತ್ತಿದೆ. 

ಬೆಂಗಳೂರಿನ ಊರ ದೇವತೆ ಅಣ್ಣಮ್ಮದೇವಿ ಉತ್ಸವ, ಕನ್ನಡ ದೇವಿ ಭುವನೇಶ್ವರಿಯ ಭವ್ಯ ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಗೃಹರಕ್ಷಕ ದಳ ಸಿಬ್ಬಂದಿ, 33ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಪಾಲ್ಗೊಳ್ಳುತ್ತಿದೆ.

ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯೊಂದರಲ್ಲೆ ಕನಿಷ್ಠ 50ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ತೆರಳುವ ಕಾರಣ ಸಂಚಾರದ ಒತ್ತಡ ನಿಭಾಯಿಸಲು ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದ್ದಾರೆ