ಗುರುವಾರ, ಫೆಬ್ರವರಿ 3, 2011

ಕನ್ನಡ ಸಮ್ಮೇಳನ ರಜೆ ಯಾರಿಗುಂಟು ಯಾರಿಗಿಲ್ಲ

ಬೆಂಗಳೂರು, ಫೆ. 3 : ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ಮೂರು ದಿನಗಳ ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ ಎಂದು ಈ ಮೂಲಕ ಮಹಾಜನತೆಗೆ ಮತ್ತೊಮ್ಮೆ ತಿಳಿಸಲಾಗುತ್ತಿದೆ. ಫೆ. 4 ಶುಕ್ರವಾರ ಮತ್ತು 5 ಶನಿವಾರ ರಜೆ ಪ್ರಕಟಿಸಲಾಗಿದೆ.

ಉಳಿದಂತೆ ಸರಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕು ಮತ್ತಿತರ ಸಂಸ್ಥೆಗಳು ಎಂದಿನಂತೆ ಕೆಲಸ ಮಾಡಲಿವೆ. ರಜೆ ಇರುವ ಶಾಲೆಗಳ ಪಟ್ಟಿಯಲ್ಲಿ ಅನುದಾನಿತ, ಅನುದಾನರಹಿತ, ಸಿಬಿಎಸ್ ಇ, ಐಸಿಎಸ್ ಇ ವಿದ್ಯಾಸಂಸ್ಥೆಗಳೂ ಸೇರಿವೆ. ಇದೇ ವೇಳೆ, ಕೆಲವು ಅನುದಾನ ಪಡೆಯದ ಶಾಲೆಗಳು ರಜೆ ಘೋಷಿಸದೆ ಕನ್ನಡದ ಕಟ್ಟಳೆಯನ್ನು ಉಲ್ಲಂಘಿಸಿವೆ ಎಂಬ ದೂರುಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿವೆ ಎಂದು ಅಧ್ಯಕ್ಷ ನಲ್ಲೂರು ಪ್ರಸಾದ್ ಗುರುವಾರ ವಿಷಾದ ವ್ಯಕ್ತ ಪಡಿಸಿದರು.

ಬೆಂಗಳೂರಿನ ಶಾಲಾ ಮಕ್ಕಳ ಮೂಗಿಗೂ ಕನ್ನಡದ ಪರಿಮಳ ಸ್ವಲ್ಪ ತಾಗಲಿ ಎಂಬ ಉದ್ದೇಶದಿಂದ ರಜೆ ಘೋಷಿಸಲಾಗಿದೆಯೇ ವಿನಾ ಶಾಲೆಗಳಿಗೆ ಬೀಗ ಹಾಕಿ ಮಕ್ಕಳು ಮತ್ತು ಬೋಧಕ ವರ್ಗ ರಜಾ ಮಜಾ ಅನುಭವಿಸಲಿ ಎಂಬ ಉದ್ದಿಶ್ಯ ಇಲ್ಲ. ಶಾಲೆಯ ಆಡಳಿತ ವರ್ಗ, ಉಪಾಧ್ಯಾಯ, ಉಪಾಧ್ಯಾಯಿನಿಯರು, ಬೋಧಕೇತರ ಸಿಬ್ಬಂದಿ ತಮ್ಮ ತಮ್ಮ ಶಾಲೆಯ ಮಕ್ಕಳನ್ನು ಸಮ್ಮೇಳನಕ್ಕೆ ಕರೆದೊಯ್ಯಲಿ ಎನ್ನುವುದೇ ರಜೆಯ ಆಶಯವಾಗಿರುತ್ತದೆ.

"ನಮ್ಮ ಕಚೇರಿಗೂ ರಜಾ ಇದೆಯಾ ಸಾರ್?" ಎಂದು ಕೇಳುವ ದೂರವಾಣಿ ಕರೆಗಳು, ಇಮೇಲುಗಳು ಮತ್ತು ಟ್ವಿಟ್ಟರ್ ಸಂದೇಶಗಳು ನಮ್ಮ ಕಚೇರಿಗೆ ಬರುತ್ತಿವೆ. ಆಸಕ್ತಿ ಇರುವ ಕನ್ನಡಿಗರು ಒಂದೆರಡು ದಿನ ಸಾಂದರ್ಭಿಕ ರಜೆ ಹಾಕಿ ಸಮ್ಮೇಳನಕ್ಕೆ ಹೋಗಿ ಬರಬಹುದಾಗಿದೆ ಎಂದಷ್ಟೇ ಈ ಮೂಲಕ ದಟ್ಸ್ ಕನ್ನಡ ತಿಳಿಸಬಯಸುತ್ತದೆ.

ಶಾಲೆಗಳಿಗೆ ರಜಾ ಎಂದರೆ ಅರ್ಥ : ಬೆಂಗಳೂರು ನಗರ, ಉತ್ತರ ಜಿಲ್ಲೆ ಮತ್ತು ದಕ್ಷಿಣದ ಶೈಕ್ಷಣಿಕ ಜಿಲ್ಲೆಗಳಿಗೆ ಮಾತ್ರ ಎಂದು ಮತ್ತೊಮ್ಮೆ ನಮ್ಮ ಓದುಗರಿಗೆ ನೆನಪಿಸಲಾಗುತ್ತಿದೆ. ಇದರ ಹೊರತು ಕರ್ನಾಟಕದ ಇನ್ನಿತರ ಯಾವುದೇ ಜಿಲ್ಲೆಯ ಯಾವುದೇ ಶಾಲೆಗಳಿಗೂ ರಜಾ ಇಲ್ಲ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನಾ ಇದ್ದದ್ದೇ. ಸಮ್ಮೇಳನದಿಂದಾಗಿ ಬೆಂಗಳೂರು ರೈಲು ನಿಲ್ಣಾಣ, ಕೇಂದ್ರ ಬಸ್ ನಿಲ್ಣಾಣದಿಂದ ಗಾಂಧೀಬಜಾರ್ ಕಡೆ ಚಲಿಸುವ ಎಲ್ಲ ಮಾರ್ಗಗಳಲ್ಲಿ ವಿಪರೀತ ವಾಹನ ದಟ್ಟಣೆ ಇರುತ್ತದೆ ಎನ್ನುವ ಸಂಗತಿಯನ್ನೂ ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ.

ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಯಿಂದ ಆರಂಭವಾಗಿ, ಚಿಕ್ಕಪೇಟೆ, ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಜನಸಂದಣಿ ಮತ್ತು ವಾಹನಸಂದಣಿ ಅಪಾರವಾಗಿರುತ್ತದೆ. ಕರ್ನಾಟದ ಮೂಲೆಮೂಲೆಗಳಿಂದ ಬಸ್ಸು, ಮಿನಿ ವ್ಯಾನು, ಮೆಟಡಾರ್, ಕಾರುಗಳಲ್ಲಿ ಆಗಮಿಸುವ ಜನತೆಗೆ ಪಾರ್ಕಿಂಗ್ ಸಮಸ್ಯೆ ಎದುರಾಗೇ ಆಗುತ್ತದೆ. ಗಾಡಿಯನ್ನು ಎಲ್ಲಿ ಹಾಕಬೇಕು, ಸಮ್ಮೇಳನ ತಾಣಕ್ಕೆ ಎಷ್ಟುದೂರ ನಡೆದೇ ಹೋಗಬೇಕು ಎಂಬ ವಿಷಯ ಅವರವರ ಅನುಕೂಲ ಮತ್ತು ಅನಾನುಕೂಲಕ್ಕೇ ಬಿಟ್ಟ ವಿಷಯವಾಗಿದೆ.

ಸಿಟಿ ಬಸ್ಸು, ಆಟೋ ಸೇವೆಯನ್ನು ಅವಲಂಬಿಸಿದವರಿಗೂ ಕಷ್ಷಕಷ್ಟವೇ. ನಗರದ ದೂರ ಬಡಾವಣೆಗಳಿಂದ ಆಗಮಿಸುವವರು ಸಮ್ಮೇಳನ ಸಭಾಂಗಣ ತಲಪುವುದಕ್ಕೆ ಕನಿಷ್ಠ ಒಂದೆರಡು ಮೈಲಿ ದೂರ ನಡೆಯಲು ಸಿದ್ಧರಾಗಿರಬೇಕಾದ ಪ್ರಮೇಯ ಇದೆ. ಪ್ರಯಾಣ, ಪಾರ್ಕಿಂಗ್ ತಲೆನೋವುಗಳನ್ನು ಸಹಿಸಿಕೊಂಡೂ ಕನ್ನಡ ನುಡಿ ಹಬ್ಬಕ್ಕೆ ಹೋಗಿಬಂದವರನ್ನು ಮಾತ್ರ ಕನ್ನಡದ ಸೇನಾನಿಗಳು ಎಂದು ಕರೆಯಲಾಗುತ್ತದೆ.

ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕನ್ನಡ ಹಬ್ಬದ ಸಂಭ್ರಮ ಕಾಣಬರುವುದು ನಿಸ್ಸಂಶಯ. ಉಳಿದಂತೆ ವಿಶಾಲ ಬೆಂಗಳೂರು ನಗರದ ಅಸಂಖ್ಯ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ನಾಗರೀಕರಿಗೂ ಕನ್ನಡ ಸಮ್ಮೇಳನಕ್ಕೂ ಯಾವುದೇ ಸಂಬಂಧ ಸಾರಿಗೆ ಇಲ್ಲದಿರುವುದರಿಂದ ಆ ಪ್ರದೇಶಗಳಲ್ಲಿ life normal, business as usual, life goes on ಆಗಿರುತ್ತದೆ.