ಗುರುವಾರ, ಫೆಬ್ರವರಿ 3, 2011

ಸಮ್ಮೇಳನ: ಪಾಸ್ ಇದ್ದರೆ ಬಿಎಂಟಿಸಿ ಉಚಿತ ಪಯಣ

ಬೆಂಗಳೂರು, ಫೆ.2: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳು ಸಮ್ಮೇಳನದ ಬ್ಯಾಡ್ಜ್ ಹಾಗೂ ಪಾಸ್‌ ಗಳನ್ನು ತೋರಿಸಿ ಬಿಎಂಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನ ಯಾವುದೇ ಭಾಗದಿಂದಲಾದರೂ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸಂಚಾರ ಮಾಡಲು ಈ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನದ ಪ್ರತಿನಿಧಿಯಾಗಲು ನೋಂದಾವಣೆ ಅಗತ್ಯ ಎಂದು ಅಶೋಕ್ ಹೇಳಿದರು. 

ಬೆಂಗಳೂರಿನಲ್ಲಿ 40 ವರ್ಷಗಳ ಬಳಿಕ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಸಂಪೂರ್ಣಗೊಂಡಿದ್ದು, ಇನ್ನೇನು ಅಂತಿಮ ಸ್ಪರ್ಶವಷ್ಟೇ ಬಾಕಿ ಇದೆ. ಇಂದು ನ್ಯಾಷನಲ್ ಕಾಲೇಜು ಆವರಣಕ್ಕೆ ಭೇಟಿ ನೀಡಿದ ಸ್ವಾಗತ ಸಮಿತಿಯ ಅಧ್ಯಕ್ಷ ಸಾರಿಗೆ ಸಚಿವ ಆರ್.ಅಶೋಕ್ ಎಲ್ಲ ಸಿದ್ಧತೆಯನ್ನು ನೋಡಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. 

ಊಟ ಹಾಗೂ ವಸತಿ ವ್ಯವಸ್ಥೆ: ಸಮ್ಮೇಳನದ ಮೂರು ದಿನಗಳೂ ಪ್ರತಿ ದಿನ 60 ಸಾವಿರ ಪ್ರತಿನಿಧಿಗಳು ಊಟ ಮಾಡುವಷ್ಟು ಅಡುಗೆಯನ್ನು ಸಿದ್ದಪಡಿಸಲು ವಾಸುದೇವ ಅಡಿಗ ಅವರಿಗೆ ಸೂಚಿಸಲಾಗಿದೆ. ಏಕ ಕಾಲಕ್ಕೆ ಹತ್ತಾರು ಕಡೆಯ ಕೌಂಟರ್‌ಗಳಲ್ಲಿ ಊಟ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಕೋಟೆ ಪ್ರೌಢಶಾಲೆಯ ಆವರಣದಲ್ಲಿ, ಮಹಿಳಾ ಸೇವಾ ಸಮಾಜ ಮತ್ತು ಉದಯಭಾನು ಕಲಾಸಂಘದ ಉದ್ಯಾನವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹತ್ತಿರದ ಶಾಲಾ ಕಾಲೇಜು, ಛತ್ರ ಹಾಗೂ ಹೋಟೆಲ್‌ಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು. 

ವೇದಿಕೆಯ ವಿಶೇಷ: ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮ್ಮೇಳನವಾದ್ದರಿಂದ ವೇದಿಕೆಯ ಹಿಂಭಾಗದಲ್ಲಿ ಕೆಂಪೇಗೌಡರ ಗೋಪುರ, ಬೆಂಗಳೂರು ಅರಮನೆಯ ರೂಪವಿದ್ದು, ಬಸವನಗುಡಿಯ ಸಂಕೇತವಾಗಿ ದೊಡ್ಡ ಬಸವಣ್ಣನ ಮೂರ್ತಿಯನ್ನೂ ಬಿಂಬಿಸಲಾಗಿದೆ. ಮಧ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಹತ್ ಎಲ್.ಇ.ಡಿ. ಪರದೆಯಲ್ಲಿ ಇಡಿ ಕಾರ್ಯಕ್ರಮ ದೂರದವರೆಗೂ ಗೋಚರವಾಗುವಂತೆ ಬಿತ್ತರವಾಗಲಿದೆ. ಅಲ್ಲದೆ ವಿವಿಧ ವಿಡಿಯೋ ಸ್ಕ್ರೀನ್ ಗಳ ಮೂಲಕ ಸಮ್ಮೇಳನದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು ಎಂದು ವೇದಿಕೆ ಉಸ್ತುವಾರಿ ವಹಿಸಿಕೊಂಡಿರುವ ಶ್ರೀನಿವಾಸ ಕಪ್ಪಣ್ಣ ಅವರು ತಿಳಿಸಿದರು.