ಗುರುವಾರ, ಫೆಬ್ರವರಿ 3, 2011

ಬೆಂಗಳೂರಿನ ಎಲ್ಲೆಡೆ ಕನ್ನಡ ಬಾವುಟ ಹಾರಾಡಲಿ

ಬೆಂಗಳೂರು, ಫೆ. 2 : ಬೆಂಗಳೂರಿನಲ್ಲಿ 40 ವರ್ಷಗಳ ಬಳಿಕ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂರೂ ದಿನವೂ ನಿತ್ಯ 60 ಸಾವಿರ ಜನರಿಗೆ ಊಟ ಹಾಗೂ 5 ಸಾವಿರ ಪ್ರತಿನಿಧಿಗಳಿಗೆ, ಆಹ್ವಾನಿತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಗೃಹ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಿದ್ಧತೆಯ ಪರಿಶೀಲನೆ ನಡೆಸಿದ ನಂತರ, ಎಲ್ಲ ಸಿದ್ಧತೆಗಳೂ ಮುಗಿದಿದ್ದು, ಈಗ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಎಲ್ಲರ ನೆನಪಿನಲ್ಲಿ ಉಳಿಯುವಂತೆ ಅದ್ದೂರಿಯಿಂದ ಸಮ್ಮೇಳನ ಆಯೋಜಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರಕಾರ ಸಮ್ಮೇಳನಕ್ಕೆ 1 ಕೋಟಿ ರೂಪಾಯಿ ನೀಡಿದ್ದು, ಇನ್ನೂ 50 ಲಕ್ಷ ರೂಪಾಯಿ ನೀಡುವ ಆಶ್ವಾಸನೆ ನೀಡಿದೆ. ಬೆಂಗಳೂರಿನ ಎಲ್ಲ 28 ಶಾಸಕರು ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲ ಸದಸ್ಯರೂ ತಮ್ಮ ಒಂದು ತಿಂಗಳ ಸಂಬಳವನ್ನು ಸಮ್ಮೇಳನಕ್ಕೆ ನೀಡಲು ಸಮ್ಮತಿಸಿದ್ದಾರೆ. ಅದೇ ರೀತಿ ಸರಕಾರಿ ನೌಕರರು ಕೂಡ ದೇಣಿಗೆ ನೀಡಿದ್ದಾರೆಂದು ತಿಳಿಸಿದರು.

ಇದು ಕೇವಲ ಸಾಹಿತಿಗಳ ಸಮ್ಮೇಳನವಲ್ಲ, ಸಮಸ್ತ ಕನ್ನಡಿಗರ ಸಮ್ಮೇಳನ ಎಂದು ಹೇಳಿದ ಅವರು, ಬೆಂಗಳೂರಿನಲ್ಲಿರುವ ಹಾಗೂ ರಾಜ್ಯದ ಸಮಸ್ತ ಕನ್ನಡಿಗರೂ ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಎಲ್ಲ ಭಾಷಿಕರೂ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಮುಕ್ತ ಆಹ್ವಾನ ನೀಡಿದರು.

ಬೆಂಗಳೂರು ಶಾಸಕರು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯರುಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಾರ್ಡ್‌ಗಳಲ್ಲಿ ಹಾಗೂ ವಿವಿಧ ಕನ್ನಡ ಸಂಘಟನೆಗಳು ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಕನ್ನಡ ಧ್ವಜ ಹಾರಿಸುತ್ತಿದ್ದು, ಪ್ರತಿಯೊಬ್ಬ ಕನ್ನಡಿಗರೂ ತಮ್ಮ ತಮ್ಮ ಮನೆಗಳ ಮೇಲೆ, ಮಳಿಗೆಗಳು, ಅಂಗಡಿಗಳ ಮೇಲೆ ಕನ್ನಡ ಬಾವುಟ ಹಾರಿಸಿ ಹಬ್ಬದ ವಾತಾವರಣ ಮೂಡಿಸಬೇಕು ಎಂದು ಮನವಿ ಮಾಡಿದರು.

ಬೆಂಗಳೂರು ಕೋಟೆ ಪ್ರೌಢಶಾಲೆ ಆವರಣದಲ್ಲಿ, ಮಹಿಳಾ ಸೇವಾ ಸಮಾಜ ಮತ್ತು ಉದಯಬಾನು ಕಲಾಸಂಘದ ಉದ್ಯಾನವನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ ಕಾಲೇಜು, ಛತ್ರ ಹಾಗೂ ಹೋಟೆಲ್‌ಗಳಲ್ಲಿ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯ ವಿಶೇಷ : ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮ್ಮೇಳನವಾದ್ದರಿಂದ ವೇದಿಕೆಯ ಹಿಂಭಾಗದಲ್ಲಿ ಕೆಂಪೇಗೌಡರ ಗೋಪುರ, ಬೆಂಗಳೂರು ಅರಮನೆಯ ರೂಪವಿದ್ದು, ಬಸವನಗುಡಿಯ ಸಂಕೇತವಾಗಿ ದೊಡ್ಡ ಬಸವಣ್ಣನ ಮೂರ್ತಿಯನ್ನೂ ಬಿಂಬಿಸಲಾಗಿದೆ. ಮಧ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬೃಹತ್ ಎಲ್.ಇ.ಡಿ. ಪರದೆಯಲ್ಲಿ ಇಡೀ ಕಾರ್ಯಕ್ರಮ ಬಿತ್ತರವಾಗಲಿದ್ದು, ದೂರದವರೆಗೂ ಗೋಚರಿಸಲಿದೆ ಎಂದು ಹೇಳಿದರು.