ಗುರುವಾರ, ಫೆಬ್ರವರಿ 3, 2011

ಎಲ್ಲ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನವಿರಲಿ

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿರುವ ಬೆಂಗಳೂರಿನ ಎಲ್ಲ ಚಿತ್ರಮಂದಿರಗಳಲ್ಲಿ ಫೆ.4ರಿಂದ 6ರವರೆಗೆ ಕನ್ನಡ ಚಿತ್ರಗಳನ್ನೇ ಪ್ರದರ್ಶನ ಮಾಡುವಂತೆ ಗೃಹ ಸಚಿವ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಆರ್ ಅಶೋಕ್ ಚಿತ್ರಮಂದಿರಗಳ ಮಾಲಿಕರಿಗೆ ಮನವಿ ಮಾಡಿದ್ದಾರೆ.

40 ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡಾಭಿಮಾನಿಗಳು ಸಾಹಿತ್ಯ ಜಾತ್ರೆಗೆ ಬರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲ ಚಲನಚಿತ್ರ ಮಂದಿರಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಚಿತ್ರಗಳನ್ನೇ ಪ್ರದರ್ಶನ ಮಾಡುವಂತೆ ಅವರು ಆಗ್ರಹಿಸಿದರು.

ಚಿತ್ರಪ್ರದರ್ಶಕರು, ವಿತರಕರು ಹಾಗೂ ಚಲನಚಿತ್ರ ಮಂದಿರಗಳ ಮಾಲಿಕರು ಸಮ್ಮೇಳನದ ನಡೆಯುವ ಸಂದರ್ಭದಲ್ಲಿ ಕನ್ನಡ ಚಿತ್ರ ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆಯಬೇಕು ಎಂದು ಅವರು ಕರೆ ನೀಡಿದರು. ಈ ಸಂಬಂಧ ಎಲ್ಲ ಚಿತ್ರ ಮಂದಿರ ಮಾಲಿಕರುಗಳಿಗೂ ಪತ್ರ ಬರೆಯುವುದಾಗಿ ಅವರು ಹೇಳಿದರು.

ಈ ನಡುವೆ, ಸಮ್ಮೇಳನದ ಪ್ರಯುಕ್ತ ಫೆ.4 ಶುಕ್ರವಾರದಂದು ಚಿತ್ರ ಪ್ರದರ್ಶನಗಳನ್ನು ಹೊರತುಪಡಿಸಿ ಎಲ್ಲ ಚಲನಚಿತ್ರ ಚಟುವಟಿಕೆಗಳಿಗೆ ರಜಾನೀಡಲು ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಸಮ್ಮೇಳನದ ಮೊದಲ ದಿನ ನಡೆಯುವ ಮೆರವಣಿಗೆಯಲ್ಲಿ ಚಿತ್ರರಂಗದ ಅನೇಕ ತಾರಾಮಣಿಗಳು ಭಾಗವಹಿಸುತ್ತಿದ್ದಾರೆ.