ಸೋಮವಾರ, ಫೆಬ್ರವರಿ 7, 2011

ತಂತ್ರಜ್ಞಾನ ಭಾಷೆಯನ್ನು ಕೊಲ್ಲಲು ಸಾಧ್ಯವಿಲ್ಲ: ಜಿವಿ

ಬೆಂಗಳೂರು,ಫೆ,6: ತಂತ್ರಜ್ಞಾನದಿಂದ ಭಾಷೆ ಬೆಳೆಸಬಹುದೇ ಹೊರತೂ, ಭಾಷೆಯ ಅವನತಿಗೆ ತಂತ್ರಜ್ಞಾನ ಎಂದೂ ಕಾರಣವಾಗುವುದಿಲ್ಲ. ಕಂಪ್ಯೂಟರ್ ಬಂದ ಮೇಲೂ ನಾನು ಟೈಪ್ ರೇಟರ್ ನಲ್ಲೇ ಕೆಲಸ ಮಾಡುತ್ತೀನಿ ಎಂದರೆ ಯಾರು ಕೇಳುವುದಿಲ್ಲ. ಆದರೆ, ಕಂಪ್ಯೂಟರ್ ಅನ್ನು ಸ್ಥಳೀಯ ಅನುಕೂಲಕ್ಕೆ ತಕ್ಕಂತೆ ರೂಪಿಸುವುದು ಅಗತ್ಯ. ತಂತ್ರಜ್ಞಾನ, ಸಾಧಕಗಳಿಗಿಂತ ಅದನ್ನು ಬಳಸುವ ಗ್ರಾಹಕರು ಹೆಚ್ಚೆಚ್ಚು ಕನ್ನಡ ಬಳಸುವುದು ಮುಖ್ಯ ಎಂದು ಜಿವಿ ಅಭಿಪ್ರಾಯಪಟ್ಟರು.

ಬಸವನಗುಡಿ ನ್ಯಾಷ್‌ನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ 77ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆ ದಿನದಂದು ‘ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ’ ಗೋಷ್ಠಿಯಲ್ಲಿ ಪಾಲ್ಗೊಂಡ ಅವರು, ನಾಡು-ನುಡಿ, ರಾಜಕೀಯ, ಕನ್ನಡ ವರ್ಣಮಾಲೆ, ಕಾಸ್ಮೋಪಾಲಿಟನ್ ಸಂಸ್ಕೃತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿದ್ವತ್ತಿನಿಂದ ಕೂಡಿದ ಅತ್ಯಂತ ಸೂಕ್ತ, ಸಮರ್ಥ ಮತ್ತು ಸಕಾಲಿಕ ಉತ್ತರಗಳನ್ನು ನೀಡಿದರು.

ಸತ್ತ್ವವಿರದ ಧಾರಾವಾಹಿಗಳು: ಧಾರಾವಾಹಿಗಳು ಕನ್ನಡ ಸತ್ತ್ವ ಕಳೆದುಕೊಳ್ಳುತ್ತಿದೆ: ಇದು ನಮ್ಮ ಜೀವನವನ್ನು ಹಾಳು ಮಾಡುತ್ತಿದೆ. ಇಂದಿನ ಧಾರಾವಾಹಿಗಳಿಗೆ ಕೊನೆಯೇ ಇಲ್ಲ. ತಿಂಗಳುಗಟ್ಟಲೆ ಒಂದೇ ಕಡೆ ನಿಂತಿರುತ್ತವೆ. ಟಿ.ವಿ ಇರೋದು ಜ್ಞಾನ ವೃದ್ದಿಗೆ ಮತ್ತು ವರ್ತಮಾನದ ಮಾಹಿತಿ ಪಡೆದುಕೊಳ್ಳಲು. ಆದರೆ, ಧಾರಾವಾಹಿಗಳು ಪ್ರಾಬಲ್ಯ ಸಾಧಿಸಿಬಿಟ್ಟಿವೆ. ಯಾರಿಂದಲೂ, ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಜನ ಸಾಮಾನ್ಯರು ಅಸಹಾಯಕರಾಗಿದ್ದಾರೆ ಎಂದು ಜಿವಿ ಹೇಳಿದರು.

ಅಡುಗೆ ಕಾರ್ಯಕ್ರಮದಲ್ಲಿರುವ ನಿರೂಪಕಿ ಹಾಗೂ ಅಡುಗೆ ಮಾಡುವ ಅತಿಥಿಗಳಿಬ್ಬರಿಂದಲೂ ಕನ್ನಡದ ಕೊಲೆ ಮಾಡುತ್ತಿದ್ದಾರೆ. ಕನ್ನಡ ತರಕಾರಿ ಇಂಗ್ಲೀಷ್ ತರಕಾರಿಯಾಗಿ ಪರಿವರ್ತನೆಯಾಗುತ್ತಿದೆ. ಅಡುಗೆ ಮನೆ ಕಿಚನ್ ಆಗುತ್ತಿದೆ. ಕೆಲವು ಆಂಗ್ಲ ಪದಗಳನ್ನು ಅದೇ ರೀತಿ ಉಚ್ಚರಿಸುವುದು ಒಳ್ಳೆಯದು, ರೈಲ್ ಗೆ ರೈಲು ಎಂದರೆ ಸಾಕು ಅದರ ಬದಲು ಉಗಿಬಂಡಿ ಎಂದರೆ ಯಾರಿಗೆ ಅರ್ಥವಾಗುತ್ತದೆ. ಭಾಷಾಂತರ ಮಾಡಿ ನಿಘಂಟು ರೂಪಿಸಬಹುದು ಆದರೆ, ಅದರಿಂದ ಭಾಷೆ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಕನ್ನಡ ವರ್ಣ ಮಾಲೆ ಬದಲಾವಣೆ ಸಲ್ಲ: ಆಧುನಿಕ ತಂತ್ರಜ್ಞಾನ, ಜಾಗತೀಕರಣ ಮತ್ತು ಇತರ ಭಾಷೆಗಳ ಪ್ರಭಾವದ ಕಾರಣದಿಂದ ಕನ್ನಡ ಭಾಷೆಯನ್ನು ಸಕಾಲಿಕಗೊಳಿಸಲು ಕನ್ನಡ ವರ್ಣಮಾಲೆಗಳನ್ನು ಬದಲಾಯಿಸಬೇಕು ಎಂಬ ವಾದ ಕೇಳಿ ಬರುತ್ತಿರುವುದು ದುರದೃಷ್ಟಕರ. ಒಂದೇ ಒಂದು ಅಕ್ಷರವನ್ನು ತೆಗೆದರೂ ಅದರ ಪರಿಣಾಮ ವ್ಯತಿರಿಕ್ತವಾಗುತ್ತದೆ ಎಂದು ವೆಂಕಟಸುಬ್ಬಯ್ಯ ಗಟ್ಟಿಯಾಗಿ ನುಡಿದರು.

ಕರ್ನಾಟಕ ಭ್ರಷ್ಟಾಚಾರದಲ್ಲಿ ದೇಶದಲ್ಲೇ ಮೊದಲ ಸ್ಧಾನದಲ್ಲಿದೆ ಎಂಬ ತಮ್ಮ ಹೇಳಿಕೆ, ಕೇವಲ ಕಳೆದ 2.5 ವರ್ಷದ ಯಡಿಯೂರಪ್ಪ ಅವರ ಆಡಳಿತಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಕಳೆದ 20 ವರ್ಷಗಳಿಂದ ಆ ಸ್ಥಿತಿ ನಿರ್ಮಾಣವಾಗಿದೆ ಎಂದ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಆರ್ಥಿಕ ನೆರವು ನೀಡಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.

ತಮ್ಮ ಹೇಳಿಕೆ ಕೇವಲ ಒಂದು ರಾಜಕೀಯ ಪಕ್ಷವನ್ನುದ್ದೇಶಿಸಿ ಆಡಿದ ಮಾತಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜಕಾರಣಿಗಳು ಬಾರದಿದ್ದರೆ ಸಮ್ಮೇಳನ ನಡೆಸಲು ಯಾರು ಆರ್ಥಿಕ ನೆರವು ನೀಡುತ್ತಾರೆ. ರಾಜಕಾರಣಿಗಳಿಗೂ ಕನ್ನಡದ ಬಗ್ಗೆ ಪ್ರೀತಿಯಿದೆ. ವೀರಪ್ಪ ಮೊಯ್ಲಿ ಮಹಾ ಕಾವ್ಯ ರಚಿಸಿದ್ದಾರೆ. ಎಂ.ಪಿ. ಪ್ರಕಾಶ್ ಬೃಹತ್ ಗ್ರಂಥ ಸಂಪಾದನೆ ಮಾಡಿದ್ದಾರೆ ಅಲ್ಲವೇ ಎಂದರು.

ಶೇ.50 ಕನ್ನಡಿಗರಿಗೆ ಉದ್ಯೋಗ ಸಿಗಲಿ: ರಾಜ್ಯದಲ್ಲಿರುವ ಅನ್ಯ ಭಾಷಿಕರನ್ನು ಕನ್ನಡಿಗರನ್ನಾಗಿ ಮಾಡುವುದು ಹೇಗೆ? ಮತ್ತು ಜಾಗತೀಕರಣದ ಪ್ರಭಾವದಿಂದ ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿವಿ, ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಫಲವತ್ತಾದ ಭೂಮಿಯನ್ನು ಖರೀದಿಸಿ ಅಲ್ಲಿ ಬೃಹತ್ ಉದ್ಯಮಗಳನ್ನು ಸ್ಥಾಪಿಸುತ್ತವೆ. ಅಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗ್ತಾ ಇಲ್ಲ. ಇಲ್ಲಿ ಸ್ಥಾಪಿಸುವ ಉದ್ಯಮಗಳಲ್ಲಿ ಶೇ.50 ರಷ್ಟು ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಸರಕಾರ ಕಠಿಣ ಕಾನೂನು ಮಾಡಬೇಕು ಎಂದರು.

ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾದೀತು: ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಕರು, ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗತೀಕರಣದ ಪರಿಣಾಮವಾಗಿ ದೇಶ ವಿದೇಶಗಳ ಜನ ಇಲ್ಲಿ ನೆಲೆ ಕಂಡು ಕೊಂಡಿದ್ದಾರೆ. ಅವರೆಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ. ಹಾಗಾಗಿ ಕನ್ನಡೇತರ ಭಾಷೆಗಳ ಶಾಲೆಗಳ ಸಂಖ್ಯೆ ಮತ್ತು ಮಾತನಾಡುವವರು ಅಧಿಕವಾಗುತ್ತಿದ್ದಾರೆ. ಈ ಸ್ಥಿತಿ ಮುಂದುವರಿದರೆ ಮುಂದೊಂದು ದಿನ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಲು ಒತ್ತಡ ಬರಬಹುದು ಎಂದು ವೆಂಕಟಸುಬ್ಬಯ್ಯ ಮುನ್ನೆಚ್ಚರಿಕೆ ನೀಡಿದರು.