ಮಂಗಳವಾರ, ಫೆಬ್ರವರಿ 1, 2011

ಸಮ್ಮೇಳನ ಸಂಕ್ರಮಣ


ಪ್ರಜಾವಾಣಿ » ಸಾಪ್ತಾಹಿಕ ಪುರವಣಿ
ಜಿ.ಎಸ್. ಶಿವರುದ್ರಪ್ಪ
ಕನ್ನಡದ ಪ್ರೋತ್ಸಾಹಕ್ಕೆ ಇರುವಷ್ಟು ಸಂಸ್ಥೆ-ವ್ಯವಸ್ಥೆಗಳು ಬೇರಾವ ರಾಜ್ಯದಲ್ಲೂ ಇಲ್ಲವೆಂದೇ ತೋರುತ್ತವೆ. ಇವೆಲ್ಲ ಸಾಧ್ಯವಾದದ್ದು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಕೊಟ್ಟ ಭಾಷಣ ರೂಪದ ಸಲಹೆಗಳಿಂದ ಮತ್ತು ತನ್ನ ಅಧಿವೇಶನದ ಕೊನೆಯ ದಿನ ಸಾರ್ವಜನಿಕವಾಗಿ ಅದು ಕೈಕೊಂಡ ನಿರ್ಣಯಗಳಿಂದ.


ಕನ್ನಡ ಸಾಹಿತ್ಯ ಪರಿಷತ್ತಿನ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ಕ್ಕೆ ಬೆಂಗಳೂರು ಸಿದ್ಧವಾಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಅಂದರೆ 1970ರಂದು ನಲವತ್ತೇಳನೆಯ ಸಾಹಿತ್ಯ ಸಮ್ಮೇಳನ ನಡೆದದ್ದು ಬೆಂಗಳೂರಿನಲ್ಲೇ. ಇದು ಎಪ್ಪತ್ತೇಳನೆಯ ಸಮ್ಮೇಳನ. ಕನ್ನಡದ ಹೆಸರಿನಲ್ಲಿ ವರ್ಷಕ್ಕೆ ಒಂದು ಸಲ ಕರ್ನಾಟಕದ ಪ್ರಮುಖ ಸ್ಥಳವೊಂದರಲ್ಲಿ ಬಹುಸಂಖ್ಯೆಯ ಕನ್ನಡಿಗರು ಸಮಾವೇಶಗೊಳ್ಳುವುದು, ತಮ್ಮ ಮೆಚ್ಚಿನ ಸಾಹಿತಿಗಳನ್ನು ಕಾಣುವುದು, ಹಳೆ ಪರಿಚಯಗಳನ್ನು ನವೀಕರಿಸಿಕೊಳ್ಳುವುದು ಮತ್ತು ಕನ್ನಡದ ಸಮಸ್ಯೆಗಳನ್ನು ಕುರಿತು ಚರ್ಚಿಸುವುದು ಒಂದು ಮಹತ್ವದ ಘಟನೆಯೆಂದೇ ನನ್ನ ತಿಳಿವಳಿಕೆಯಾಗಿದೆ. ಅಷ್ಟೆ ಅಲ್ಲ, ಪ್ರತಿಯೊಂದು ಸಮ್ಮೇಳನದಲ್ಲಿಯೂ ಕನ್ನಡಕ್ಕೆ ಗಣನೀಯವಾದ ಸೇವೆ ಸಲ್ಲಿಸಿದ ಸಾಹಿತಿಯೊಬ್ಬರನ್ನು ಸಾಹಿತ್ಯ ಪರಿಷತ್ತಿನ ಕಾರ್ಯಕಾರೀ ಸಮಿತಿಯು ಈ ವಾರ್ಷಿಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸುತ್ತದೆ ಎನ್ನುವುದು ಒಳ್ಳೆಯ ಸಂಪ್ರದಾಯವಾಗಿದೆ. ಈ ಸಲದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದಿರುವವರು ನಿಜವಾದ ಅರ್ಥದಲ್ಲಿ ಹಿರಿಯರೂ ಮತ್ತು ಘನ ವಿದ್ವಾಂಸರೂ ಆದ ಪ್ರೊ.ಜಿ.ವೆಂಕಟಸುಬ್ಬಯ್ಯನವರು. ತುಂಬ ತಡವಾಗಿಯಾದರೂ ಪ್ರೊ.ಜಿ.ವೆಂಕಟಸುಬ್ಬಯ್ಯನವರಂಥ ಪರಿಣತ ಪ್ರಜ್ಞೆಯ ವಿದ್ವಾಂಸರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದದ್ದು ಸಮಾಧಾನದ ಸಂಗತಿಯಾಗಿದೆ.

ಈವರೆಗೆ 76 ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಇದು 77ನೇ ಸಾಹಿತ್ಯ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ. ಸುಮಾರು ಮೂರು ದಶಕಗಳ ಹೋರಾಟದ ನಂತರ, ಅದುವರೆಗು ಭಾರತದ ಹಲವು ಹತ್ತು ಪ್ರಾಂತ್ಯಗಳೊಳಗೆ ಹರಿದು ಹಂಚಿಹೋಗಿದ್ದ ಕರ್ನಾಟಕವು- ತನಗೆ ನ್ಯಾಯವಾಗಿ ಸಲ್ಲಬೇಕಾದ ಅದೆಷ್ಟೋ ಭಾಗಗಳನ್ನು ಕಳೆದುಕೊಂಡು ಏಕೀಕೃತ ರಾಜ್ಯವಾಗಿ ರೂಪುಗೊಂಡಿತು. ಆದರೆ ಈ ಕರ್ನಾಟಕದ ಬದುಕಿನ ಸಮಸ್ತ ಹಂತಗಳಲ್ಲಿ- ಶಿಕ್ಷಣದಲ್ಲಿ, ಆಡಳಿತದಲ್ಲಿ, ದೈನಂದಿನ ವ್ಯವಹಾರಗಳಲ್ಲಿ- ಇನ್ನೂ ಕನ್ನಡವು ಪಡೆದುಕೊಳ್ಳಬೇಕಾದ ಅಗ್ರಸ್ಥಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬ್ರಿಟಿಷ್ ಆಡಳಿತ ಕಾಲದಲ್ಲಿ ಒಂದರಿಂದ ಹತ್ತನೆ ತರಗತಿಯವರೆಗೆ ಮಾತೃಭಾಷಾ ಶಿಕ್ಷಣ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಇದ್ದ ಅವಕಾಶ, ಈಗ ನಮ್ಮವರೆ ಆಳುತ್ತಿರುವ ಸಂದರ್ಭದಲ್ಲಿ ಜಾರಿಗೆ ಬರುವುದು ದುಸ್ತರವಾಗಿದೆ. ಹಾಗೆ ನೋಡಿದರೆ ಕನ್ನಡದ ಪ್ರೋತ್ಸಾಹಕ್ಕೆ ಅಭಿವೃದ್ಧಿಗೆ ಇರುವಷ್ಟು ಸಂಸ್ಥೆಗಳು ವ್ಯವಸ್ಥೆಗಳು ಬಹುಶಃ ಬೇರಾವ ರಾಜ್ಯದಲ್ಲೂ ಇಲ್ಲವೆಂದೆ ತೋರುತ್ತವೆ. ಇವೆಲ್ಲ ಸಾಧ್ಯವಾದದ್ದು ಉದ್ದಕ್ಕೂ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಕೊಟ್ಟ ಭಾಷಣ ರೂಪದ ಸಲಹೆಗಳಿಂದ ಮತ್ತು ತನ್ನ ಅಧಿವೇಶನದ ಕೊನೆಯ ದಿನ ಸಾರ್ವಜನಿಕವಾಗಿ ಅದು ಕೈಕೊಂಡ ನಿರ್ಣಯಗಳಿಂದ. ಪ್ರತಿ ಸಮ್ಮೇಳನದ ಅಧ್ಯಕ್ಷ ಭಾಷಣಗಳನ್ನು ನೋಡಿದರೆ (ಸಾಹಿತ್ಯ ಪರಿಷತ್ತು ಅವುಗಳನ್ನು ಹಲವು ಸಂಪುಟಗಳಲ್ಲಿ ಪ್ರಕಟಿಸಿದೆ)- ಈ ಪರಿಣತ ಮನಸ್ಸುಗಳು ಕನ್ನಡದ ಅಂದಂದಿನ ಸಮಸ್ಯೆಗಳನ್ನು ಕುರಿತು ಚಿಂತಿಸಿದ ಹಾಗೂ ಮಾರ್ಗದರ್ಶನ ಮಾಡಿದ ಪರಿಯನ್ನು ಯಾರಾದರೂ ಗುರುತಿಸಬಹುದು.

ಸಮ್ಮೇಳನದ ಕೊನೆಯ ದಿನ ಸಾರ್ವಜನಿಕವಾಗಿ ಪರಿಷತ್ತು ಕೈಕೊಂಡ ಅದೆಷ್ಟೋ ನಿರ್ಣಯಗಳು ಮುಂದಿನ ಸಮ್ಮೇಳನದ ಹೊತ್ತಿಗೆ ಎಷ್ಟರಮಟ್ಟಿಗೆ ಕಾರ್ಯಗತವಾದವೆಂಬ ಬಗೆಗೆ ವರದಿ ಒಪ್ಪಿಸುವ ಒಂದು ವ್ಯವಸ್ಥೆಯೇ ಇರುವಂತೆ ತೋರುವುದಿಲ್ಲ. ಸುಮ್ಮನೆ ಕಾರ್ಯಗತವಾಗದ ನಿರ್ಣಯಗಳನ್ನು ಮಂಡಿಸುವುದರಲ್ಲಿ ಯಾವ ಪ್ರಯೋಜನವೂ ಇಲ್ಲ.

ನಾನು ಸುಮಾರು ಹತ್ತರಷ್ಟು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿರಬಹುದು, ಅಷ್ಟೆ. ಬಹುತೇಕ ಕಡೆ ಉದ್ಘಾಟನಾ ಸಮಾರಂಭದ ಮೊದಲ ದಿನದ ವಿಶಾಲ ವೇದಿಕೆ, ಬರೀ ಅಧಿಕಾರಾರೂಢ ರಾಜಕಾರಣಿಗಳಿಂದ, ಕಾವೀ ಬಟ್ಟೆಯ ‘ಜಗದ್ಗುರು’ಗಳಿಂದ, ಸ್ಥಳೀಯ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರುಗಳಿಂದ ತುಂಬಿ ತುಂಬಿ ತುಳುಕುವುದನ್ನು ನೋಡಿದ್ದೇನೆ. ಇವರ ನಡುವೆ ಸಮಾರಂಭದ ಕೇಂದ್ರ ಬಿಂದುವಾಗಬೇಕಾಗಿದ್ದ ಸಮ್ಮೇಳನಾಧ್ಯಕ್ಷರು, ಅಷ್ಟೇನೂ ಮಹತ್ವದವರಲ್ಲವೆಂಬಂತೆ ಬಿಂಬಿಸಲ್ಪಟ್ಟ ರೀತಿಗೆ ನಾನು ಕಸಿವಿಸಿಗೊಂಡಿದ್ದೇನೆ. ಪರಿಷತ್ತು ಇಂಥ ಸಮ್ಮೇಳನಕ್ಕೆ ಸರ್ಕಾರದಿಂದ ವಿಪುಲವಾದ ಧನಸಹಾಯವನ್ನು ಪಡೆದುಕೊಳ್ಳುವುದು ಅನಿವಾರ್ಯವಾದುದರಿಂದ ಮಾನ್ಯ ಮಂತ್ರಿಮಹೋದಯರಿಗೆ ವೇದಿಕೆಯ ಮೇಲೆ ವಿರಾಜಿಸುವ ಅವಕಾಶವನ್ನು ವ್ಯವಸ್ಥಾಪಕರು ಕಲ್ಪಿಸುವ ನಿರ್ಬಂಧಕ್ಕೆ ಒಳಗಾಗುತ್ತಾರೆಂದು ತೋರುತ್ತದೆ. ಈ ದೃಶ್ಯವನ್ನು ಮಾರ್ಪಡಿಸಲು ಸಾಧ್ಯವಿಲ್ಲವೆ?

ನಮ್ಮ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುವ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಈ ವ್ಯವಸ್ಥೆಯಲ್ಲಿ ಗೌರವಯುತವಾದ ಬದಲಾವಣೆಯನ್ನು ತರಲು ಸಾಧ್ಯವಾಗಿದೆ ಎಂದು ಕೇಳಿದ್ದೇನೆ. ಈ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೆ ಸಾಹಿತಿಗಳಿಗಷ್ಟೆ ಅವಕಾಶ. ಇನ್ನುಳಿದವರು- ರಾಜಕಾರಣಿಗಳನ್ನೂ ಒಳಗೊಂಡಂತೆ ಸಭಾಭವನದಲ್ಲಿ ಗೌರವಾನ್ವಿತ ಆಹ್ವಾನಿತರು. ಹಾಗೆಂದರೆ ರಾಜಕೀಯ ಕ್ಷೇತ್ರದಲ್ಲಿದ್ದೂ ಸಾಹಿತಿಯಾಗಿ ಹೆಸರು ಮಾಡಿದವರ ಮಾತು ಬೇರೆ