ಶುಕ್ರವಾರ, ಫೆಬ್ರವರಿ 4, 2011

ಯಡಿಯೂರಪ್ಪ ಅವರಿಂದ ಸಾಹಿತ್ಯ ಸಮ್ಮೇಳನ ಉದ್ಘಾಟನೆ

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮ್ಮಳಾನಧ್ಯಕ್ಷ ಪ್ರೊ. ಗಂಜಾಂ ವೆಂಕಟಸುಬ್ಬಯ್ಯ ಅವರ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನ 2.45ಕ್ಕೆ ಉದ್ಘಾಟಿಸಿದರು. ನಾಡಪ್ರಭು ಕೆಂಪೇಗೌಡ ಮಹಾಮಂಟಪದಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಈ ಉದ್ಘಾಟನಾ ಸಮಾರಂಭಕ್ಕೆನ್ಯಾಷನಲ್ ಕಾಲೇಜು ಮೈದಾನದಲ್ಲಿ ಅತ್ಯುತ್ಸಾಹದಿಂದ ಸೇರಿದ್ದ ಸಹಸ್ರಾರು ಸಂಖ್ಯೆಯ ಕನ್ನಡಿಗರು ಸಾಕ್ಷಿಯಾದರು.


ಸಚಿವ ಆರ್. ಅಶೋಕ್ ಅವರು ಸ್ವಾಗತ ಭಾಷಣ ಕೋರಿದರು. ಕಸಾಪ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ಬಾಲಗಂಗಾಧರನಾಥ ಸ್ವಾಮಿ, ಸಂಸದ ಅನಂತಕುಮಾರ್, ಸಚಿವರಾದ ಸುರೇಶ್ ಕುಮಾರ್, ಡಾ. ಯು.ಆರ್. ಅನಂತಮೂರ್ತಿ, ದೇ.ಜವರೇಗೌಡ, ಡಾ. ಗೀತಾ ನಾಗಭೂಷಣ್, ರಾಜ್ಯಸಭೆ ಸದಸ್ಯೆ ಬಿ. ಜಯಶ್ರಿ, ಕನ್ನಡ ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಪಿಜಿಆರ್ ಸಿಂಧ್ಯಾ, ಡಾ. ಡಿ. ಹೇಮಚಂದ್ರ ಸಾಗರ್, ಡಾ. ಎಂ.ಎಂ. ಕಲಬುರ್ಗಿ, ಚಂಪಾ, ಮಾಜಿ ರಾಜ್ಯಪಾಲ ರಾಮಾ ಜೋಯಿಸ್, ಕನ್ನಡ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಇದಕ್ಕೂ ಮುನ್ನ, ಕಾರ್ಪೊರೇಷನ್‌ನಿಂದ ಬೆಳಗ್ಗೆ 10 ಗಂಟೆಗೆ ಹೊರಟ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮತ್ತು ಗಾಂಧಿನಗರದಿಂದ ಮೆರವಣಿಗೆ ಆರಂಭಿಸಿದ್ದ ಸಿನಿ ಕಲಾವಿದರ ದಂಡು ನ್ಯಾಷನಲ್ ಕಾಲೇಜಿನಲ್ಲಿ ಒಟ್ಟಿಗೆ ಬಂದು ಸೇರಿತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮ್ಮಳಾನಧ್ಯಕ್ಷ ಕನ್ನಡ ಪದ ಪಂಡಿತ, ಮಂಡ್ಯ ಮಣ್ಣಿನ ದಿಗ್ಗಜ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಸಮ್ಮೇಳನ ಸ್ಥಳಕ್ಕೆ ಬರ ಮಾಡಿಕೊಂಡರು.